ADVERTISEMENT

ಸಮಸ್ಯೆಗಳ ಆಗರ ಗಲಗ ಸರ್ಕಾರಿ ಪ್ರೌಢಶಾಲೆ

ಅಲಿಬಾಬಾ ಪಟೇಲ್
Published 11 ಫೆಬ್ರುವರಿ 2018, 12:58 IST
Last Updated 11 ಫೆಬ್ರುವರಿ 2018, 12:58 IST
ಜಾಲಹಳ್ಳಿಗೆ ಸಮೀಪದ ಗಲಗ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಯಲಿನಲ್ಲಿ ವಿದ್ಯಾಭ್ಯಾಸ ಕಲಿಯುತ್ತಿರುವ ವಿದ್ಯಾರ್ಥಿಗಳು
ಜಾಲಹಳ್ಳಿಗೆ ಸಮೀಪದ ಗಲಗ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಯಲಿನಲ್ಲಿ ವಿದ್ಯಾಭ್ಯಾಸ ಕಲಿಯುತ್ತಿರುವ ವಿದ್ಯಾರ್ಥಿಗಳು   

ಜಾಲಹಳ್ಳಿ: ಸಮೀಪದ ಗಲಗ ಗ್ರಾಮ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

8ರಿಂದ 10ನೇ ತರಗತಿ ವರೆಗೆ ಹೊಂದಿರುವ ಈ ಶಾಲೆಯಲ್ಲಿ ಸುಮಾರು 336 ವಿದ್ಯಾರ್ಥಿಗಳು ವಿದ್ಯಾಭಾಸ ಮಾಡುತ್ತಿದ್ದು, ಎಂಟು ಮಂದಿ ಶಿಕ್ಷಕರು ಇದ್ದಾರೆ.

25 ವರ್ಷಗಳ ಹಿಂದೆ ನಿರ್ಮಾಣಗೊಂಡ 5 ಕೊಠಡಿಗಳು ಶಿಥಿಲಗೊಂಡಿವೆ. ಉಳಿದ ಮೂರು ಕೊಠಡಿಯಲ್ಲಿ ಬೋಧನೆ ಮಾಡಲಾಗುತ್ತಿದೆ ಎಂದು ಪ್ರಭಾರ ಮುಖ್ಯಶಿಕ್ಷಕ ಭೀಮೋಜಿರಾವ್‌ ಜಗಪತ್‌ ತಿಳಿಸಿದರು.

ADVERTISEMENT

ಶಾಲೆಗೆ ವಿದ್ಯುತ್‌ ಸಂಪರ್ಕ ಇಲ್ಲ ಕಾರಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆ ತೊಂದರೆ ಉಂಟಾಗಿದೆ.

ಶಾಲೆಯ ಪಕ್ಕದಲ್ಲಿಯೇ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಅಡಿ ₹40 ಲಕ್ಷ ವೆಚ್ಚದಲ್ಲಿ ಶಾಲೆ ನಿರ್ಮಿಸಲಾಗಿದೆ. ಗುತ್ತಿಗೆದಾರರಿಗೆ ಅಂತಿಮ ಬಿಲ್‌ ಬಿಡುಗಡೆ ಆಗಿಲ್ಲ ಎಂದು ಹಸ್ತಾಂತರ ಮಾಡಿಲ್ಲ.

ಶಾಲಾ ಆವರಣದಲ್ಲಿ ಕೈಪಂಪ್‌ಗಳು ಇವೆ. ಆದರೆ, ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲೋರೈಟ್‌ ಅಂಶ ಇರುವುದರಿಂದ ಮನೆಯಿಂದ ನೀರು ತೆಗೆದುಕೊಂಡು ಬರುತ್ತಿದ್ದಾರೆ. ಶಾಲೆಗೆ ಶುದ್ಧ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸಬೇಕೆಂದು ಗ್ರಾಮದ ಮುಖಂಡ ದೇವಣ್ಣ ನಾಯಕ ಒತ್ತಾಯಿಸಿದ್ದಾರೆ.
***
₹ 4.5 ಕೋಟಿ ಅನುದಾನ

ಗಲಗ ಗ್ರಾ.ಪಂ ಗೆ 2017–18ನೇ ಸಾಲಿನ ಹೈದರಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ನೀಡುವ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸುಮಾರು ₹4.5 ಕೋಟಿ ನೀಡಲಾಗಿದೆ. ಆದರೆ, ಗ್ರಾಮಸ್ಥರು ತಿಳಿಸಿದ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗಿದೆ. ಈ ಶಾಲೆಯಲ್ಲಿ ಕೊಠಡಿ ಕೊರತೆ ಹಾಗೂ ವಿವಿಧ ಸಮಸ್ಯೆ ಕುರಿತು ಗಮನ ತಂದಿಲ್ಲ. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.