ADVERTISEMENT

ಹಿಂದೂ ಸಂಸ್ಕೃತಿಯ ರಕ್ಷಕ ಶಿವಾಜಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 6:22 IST
Last Updated 20 ಫೆಬ್ರುವರಿ 2018, 6:22 IST
ರಾಯಚೂರಿನಲ್ಲಿ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಸೋಮವಾರ ಮೆರವಣಿಗೆ ನಡೆಯಿತು
ರಾಯಚೂರಿನಲ್ಲಿ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಸೋಮವಾರ ಮೆರವಣಿಗೆ ನಡೆಯಿತು   

ರಾಯಚೂರು: ‘ಹಿಂದೂ ಸಮಾಜದ ಮೇಲಿನ ದಾಳಿಗಳಿಗೆ ಪ್ರತಿರೋಧ ತೋರುವ ಮೂಲಕ ಹಿಂದೂ ಸಂಸ್ಕೃತಿಯ ರಕ್ಷಣೆ ಮಾಡಿದ ಇತಿಹಾಸ ಪುರುಷ ಛತ್ರಪತಿ ಶಿವಾಜಿ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ದಸ್ತಗಿರಿಸಾಬ್ ದಿನ್ನಿ ಹೇಳಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶಿವಾಜಿ ಅವರು ಹುಟ್ಟು ಹೋರಾಟಗಾರರಾಗಿದ್ದು, ಬಾಲ್ಯದಿಂದಲೇ ಕ್ರಿಯಾಶೀಲರಾಗಿ ಇರುತ್ತಾರೆ. ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದ ಶಿವಾಜಿ ಅವರು, ಜೀವನದುದ್ದಕ್ಕೂ ಸಮಾನತೆ ಸಾಧಿಸಲು ಶ್ರಮಿಸಿದ್ದಾರೆ. ಸಮಾಜದಲ್ಲಿ ನ್ಯಾಯ ಹಾಗೂ ಶಾಂತಿ ದೂರವಾಗುತ್ತಿದೆ. ಆದರೆ, ಛತ್ರಪತಿ ಶಿವಾಜಿ ಅವರು ಅಂದಿನ ಕಾಲದಲ್ಲೇ ಸಮಾಜದಲ್ಲಿ ನ್ಯಾಯ, ಶಾಂತಿ ಸ್ಥಾಪನೆಗೆ ಪ್ರಯತ್ನಿಸಿದ್ದಾರೆ. ಅವರಿಗೆ ನೆಲ, ಜಲ ಹಾಗೂ ಪರಿಸರದ ಬಗ್ಗೆ ವಿಶೇಷವಾದ ಪ್ರೀತಿ, ಕಾಳಜಿ ತೋರಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಮರಾಠ ಸಮುದಾಯವನ್ನು ಒಂದೆಡೆ ಸೇರಿಸುವುದರ ಜೊತೆಗೆ ಸಾಮ್ರಾಜ್ಯ ವಿಸ್ತರಿಸಿದ್ದರು. ಬರಗಾಲಕ್ಕೆ ತುತ್ತಾದಾಗ ಅಲ್ಪ ಮಳೆಯಿಂದ ಜೋಳ, ಸಜ್ಜೆ, ಭತ್ತ, ಹತ್ತಿ, ದ್ವಿದಳ ಧಾನ್ಯ ಬೆಳೆಯುವ ಪ್ರಜ್ಞೆಯನ್ನು ಅಳವಡಿಸಿಕೊಂಡಿದ್ದರು. ತನ್ನ ಸಾಮ್ರಾಜ್ಯಕ್ಕೆ ಸ್ವರಾಜ್ಯವೆಂದು ಕರೆದುಕೊಳ್ಳುತ್ತಿದ್ದರು’ ಎಂದರು.

ನಗರಸಭೆ ಸದಸ್ಯ ಮಹಾಲಿಂಗ ರಾಂಪುರ ಮಾತನಾಡಿ, ಮುಂದಿನ ವರ್ಷದ ಜಯಂತಿ ಆಚರಣೆ ವೇಳೆಗೆ ನಗರದಲ್ಲಿ ಛತ್ರಪತಿ ಶಿವಾಜಿ ಅವರ ವೃತ್ತ ನಿರ್ಮಾಣ ಹಾಗೂ ಪುತ್ತಳಿ ಸ್ಥಾಪನೆ ಮಾಡಿ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ನಗರಸಭೆ ಸದಸ್ಯ ಈ. ವಿನಯಕುಮಾರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ನೀಲಮ್ಮ, ಮರಾಠ ಕ್ಷತ್ರಿಯ ಸಮಾಜದ ಪದಾಧಿಕಾರಿಗಳಾದ ಹನುಮಂತಪ್ಪ, ಭೀಮರಾವ್ ಜಗತಾಪ್, ಮೋಹನ್ ಶಿಂಧೆ, ತುಳಜಾರಾಮ್ ಇದ್ದರು.

ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ನಗರದ ಅಂಬಾಭವಾನಿ ದೇವಸ್ಥಾನದಿಂದ ರಂಗಮಂದಿರದವರೆಗೆ ಛತ್ರಪತಿ ಶಿವಾಜಿ ಅವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

* * 

ಛತ್ರಪತಿ ಶಿವಾಜಿ ಅವರ ತಾಯಿಯ ಮಾರ್ಗದರ್ಶನದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಂತ ತುಕಾರಾಮ್ ಅವರ ಪ್ರಭಾವದಿಂದ ಪ್ರೇರಣೆ ಪಡೆದಿದ್ದರು
ದಸ್ತಗಿರಿಸಾಬ್ ದಿನ್ನಿ, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.