ADVERTISEMENT

760 ಜನರ ಹೋಂ ಕ್ವಾರಂಟೈನ್‌ ಮುಕ್ತಾಯ

614 ಸ್ಯಾಂಪಲ್‌ಗಳ ವರದಿಗಾಗಿ ಕಾಯಲಾಗುತ್ತಿದೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 14:35 IST
Last Updated 22 ಏಪ್ರಿಲ್ 2020, 14:35 IST
ರಾಯಚೂರು ನಗರದಲ್ಲಿ ವಿವಿಧ ಸರ್ಕಾರಿ ಹಾಸ್ಟೇಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಇರಿಸಿದ್ದ ಕೆಲವು ಜನರ ಅವಧಿ ಪೂರ್ಣವಾಗಿದ್ದರಿಂದ, ಸರ್ಕಾರಿ ಬಸ್‌ಗಳ ಮೂಲಕ ಅವರನ್ನು ಬುಧವಾರ ಗ್ರಾಮಗಳಿಗೆ ತಲುಪಿಸಲಾಯಿತು
ರಾಯಚೂರು ನಗರದಲ್ಲಿ ವಿವಿಧ ಸರ್ಕಾರಿ ಹಾಸ್ಟೇಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಇರಿಸಿದ್ದ ಕೆಲವು ಜನರ ಅವಧಿ ಪೂರ್ಣವಾಗಿದ್ದರಿಂದ, ಸರ್ಕಾರಿ ಬಸ್‌ಗಳ ಮೂಲಕ ಅವರನ್ನು ಬುಧವಾರ ಗ್ರಾಮಗಳಿಗೆ ತಲುಪಿಸಲಾಯಿತು   

ರಾಯಚೂರು: ಜಿಲ್ಲೆಯಲ್ಲಿ ಇದುವರೆಗೂ ಪಾಜಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ, ಪ್ರಯೋಗಾಲಯದಿಂದ ಇದುವರೆಗೂ ಬಂದಿರುವ 97 ನೆಗೆಟಿವ್‌ ವರದಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ, ಇನ್ನೂ ಐದು ಪಟ್ಟು ವರದಿಗಳು ಬರಬೇಕಾಗಿದೆ.

ಮಾನ್ವಿ, ಲಿಂಗಸುಗೂರು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಬುಧವಾರ ಪಡೆದಿರುವ 56 ಸ್ಯಾಂಪಲ್‌ಗಳು ಸೇರಿ ಒಟ್ಟು 614 ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹೋಂ ಕ್ವಾರಂಟೈನ್‌, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರು ಸೇರಿದಂತೆ ಜಿಲ್ಲೆಯಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ಕಂಡು ಬಂದವರ ಗಂಟಲು ದ್ರವ್ಯವನ್ನು ಸಂಗ್ರಹಿಸಿ ಕಳುಹಿಸಲಾಗಿದೆ. ಈ ಎಲ್ಲ ಸ್ಯಾಂಪಲ್‌ಗಳ ವರದಿಗಳು ನಿರ್ಣಾಯಕವಾಗಲಿವೆ.

ವಿದೇಶದಿಂದ ಬಂದಿದ್ದ 183 ಜನರು ಸೇರಿದಂತೆ ವಿವಿಧೆಡೆ ಹೋಂ ಕ್ವಾರಂಟೈನ್‌ ಇರಿಸಿದ್ದ 760 ಜನರ ಕ್ವಾರಂಟೈನ್‌ ಅವಧಿ 28 ದಿನಗಳು ಬುಧವಾರ ಮುಕ್ತಾಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದುವರೆಗೂ ಕ್ವಾರಂಟೈನ್‌ನಲ್ಲಿದ್ದವರ ಮೇಲೆ ವಿಶೇಷ ನಿಗಾ ವಹಿಸಲಾಗಿತ್ತು.

ADVERTISEMENT

ಕೊರೊನಾ ಶಂಕಿತರೆಂದು ಇದುವರೆಗೂ ಆಸ್ಪತ್ರೆಗೆ ದಾಖಲಿಸಲಾಗಿದ್ದ 42 ಜನರ ಪೈಕಿ 37 ಜನರನ್ನು ಬಿಡುಗಡೆ ಮಾಡಲಾಗಿದೆ. ಬುಧವಾರ ದಾಖಲಿಸಲಾದ ಇಬ್ಬರು ಸೇರಿ ಒಟ್ಟು ಐದು ಜನರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಇದುವರೆಗೂ 2,161 ಜನರನ್ನು ಫೀವರ್‌ ಕ್ಲಿನಿಕ್‌ಗಳಲ್ಲಿ ತಪಾಸಣೆ ಮಾಡಲಾಗಿದೆ.

ಬ್ಯಾಂಕ್‌ ಮ್ಯಾನೇಜರ್‌ ಕ್ವಾರಂಟೈನ್‌:ಬಳ್ಳಾರಿಯಿಂದ ಸೋಮವಾರ ಸಂಜೆ ರಾಯಚೂರಿಗೆ ವಾಪಸ್ಸಾಗಿದ್ದ ಬ್ಯಾಂಕ್‌ ಆಫ್ ಬರೋಡಾ ಶಾಖೆಯ ಮ್ಯಾನೇಜರ್‌ ಅವರಿಗೆ ‘ಹೋಂ ಕ್ವಾರಂಟೈನ್‌’ನಲ್ಲಿ ಇರಿಸಲಾಗಿದೆ.

ವೆಂಕಟೇಶ್ವರ ಕಾಲೋನಿಯ ನಿವಾಸಿಗಳು ಈ ಬಗ್ಗೆ ಅಧಿಕಾರಿಗಳಿಗೆ ಸುಳಿವು ನೀಡಿದ್ದರು. ‘ಈ ಬಗ್ಗೆ ವಿಚಾರಿಸಿ ಕ್ವಾರಂಟೈನ್‌ನಲ್ಲಿ 14 ದಿನಗಳವರೆಗೆ ಕಡ್ಡಾಯವಾಗಿ ಇರುವಂತೆ ಮ್ಯಾನೇಜರ್‌ಗೆ ಸೂಚಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದ್ದಾರೆ.

ಕುಟುಂಬಗಳಿಗೆ ನೆರವು:ರಾಯಚೂರು ತಾಲ್ಲೂಕಿನ ಹುಣಸಿಹಾಳಹುಡ ಗ್ರಾಮದಲ್ಲಿ ಕೂಲಿಗಾಗಿ ಬಂದು ನೆಲೆಸಿರುವ ಮಹಾರಾಷ್ಟ್ರದ ಏಳು ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.