ADVERTISEMENT

8ಕ್ಕೆ ಸಿನಿಮಾ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 6:20 IST
Last Updated 3 ಏಪ್ರಿಲ್ 2012, 6:20 IST

ರಾಯಚೂರು: ಚಲನಚಿತ್ರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದೇ 8ರಂದು ಚಿತ್ರರಂಗದ ಎಲ್ಲ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಹೇಳಿದರು.

ಸೋಮವಾರ ಇಲ್ಲಿನ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಕೌಟುಂಬಿಕ ಆಧ್ಯಾತ್ಮಿಕ ಕೇಂದ್ರವಾದ ಏಗನೂರು ಟೆಂಪಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಚಲನಚಿತ್ರ ರಂಗದ ವಿವಿಧ ವಿಭಾಗಗಳಲ್ಲಿ ಹಲವಾರು ಸಮಸ್ಯೆಗಳಿವೆ. 8ರಂದು ಕರೆಯಲಾಗುವ ಸಭೆಯಲ್ಲಿ ಅವುಗಳ ಬಗ್ಗೆ ಚರ್ಚಿಸಲಾಗುವುದು. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯ ಆಧರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಪ್ರಸ್ತುತ ರಾಜ್ಯ ಸರ್ಕಾರವು ಚಲನ ಚಿತ್ರ ಅಕಾಡೆಮಿಗೆ ಒಂದು ವರ್ಷಕ್ಕೆ 1 ಕೋಟಿ ಅನುದಾನ ದೊರಕಿಸುತ್ತದೆ. ಇಷ್ಟು ಕಡಿಮೆ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸಾಲದು. ಒಂದು ಚಲನ ಚಿತ್ರ ನಿರ್ಮಾಣಕ್ಕೆ ಸದ್ಯ ಕನಿಷ್ಠ 3-4 ಕೋಟಿ ಖರ್ಚು ಮಾಡಲಾಗುತ್ತದೆ. ಬೃಹತ್ ಉದ್ದಿಮೆಯಾಗಿರುವ ಈ ಕ್ಷೇತ್ರಕ್ಕೆ ಸರ್ಕಾರವು ಕನಿಷ್ಠ 10 ಕೋಟಿ ಅನುದಾನ ದೊರಕಿಸಬೇಕು ಎಂದು ತಿಳಿಸಿದರು.

ರಾಜ್ಯದ ಎಲ್ಲ ಸಿನಿಮಾಗಳ ಡಿವಿಡಿ ಸಂಗ್ರಹ, ಚಲನಚಿತ್ರ ಇತಿಹಾಸ ಮತ್ತು ಸಿನಿಮಾ ಕಾನೂನು ಗ್ರಂಥ ಪ್ರಕಟಣೆ, ಜಿಲ್ಲಾವಾರು ಬೆಳ್ಳಿ ಹೆಜ್ಜೆ ಸಂಘಟನೆಗೆ ಒತ್ತು ಕೊಡುವುದು, ಚಲನಚಿತ್ರ ನಿರ್ಮಾಪಕರನ್ನು ಉಳಿಸುವುದು, ನಿರ್ಮಾಪಕರು ಉಳಿದರೆ ಚಲನಚಿತ್ರ ರಂಗ ಉಳಿಯುುತ್ತದೆ ಎಂಬುದು, ಕನ್ನಡ ಚಲನ ಚಿತ್ರ ದೇಶದ ಎಲ್ಲ ಕಡೆ ಏಕ ಕಾಲಕ್ಕೆ ಬಿಡುಗಡೆ ಆಗುವ ವ್ಯವಸ್ಥೆ ಏನು ಮಾರ್ಗ ಅನುಸರಿಸಬೇಕು ಎಂಬುದು ಸೇರಿದಂತೆ ಆಶಯಗಳು ತಮ್ಮ ಮುಂದೆ ಇವೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.