ADVERTISEMENT

8ರಂದು ಮಾನ್ವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 9:51 IST
Last Updated 4 ಜೂನ್ 2013, 9:51 IST

ಮಾನ್ವಿ: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಮಾನ್ವಿ ತಾಲ್ಲೂಕು ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜೂ. 8ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯ ಕಾರಣ ಸಮ್ಮೇಳನವನ್ನು ಮಾನ್ವಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗುವುದು. ಸಮ್ಮೇಳನದ ಅಧ್ಯಕ್ಷರನ್ನಾಗಿ ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ತಾಲ್ಲೂಕಿನ ಉಮಳಿ ಹೊಸೂರು ಗ್ರಾಮದವರಾದ ಎಚ್.ಪಂಪಯ್ಯ ಶೆಟ್ಟಿ ಅವರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸಮ್ಮೇಳನದಲ್ಲಿ ಎಲ್ಲ ಗೋಷ್ಠಿಗಳು ಸಮರ್ಪಕವಾಗಿ ನಡೆಯಬೇಕು. ಸಮ್ಮೇಳನದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ತಾಯಪ್ಪ ಬಿ.ಹೊಸೂರು ಮಾತನಾಡಿ, ಸಮ್ಮೇಳನದಲ್ಲಿ ಸುಮಾರು 800ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜೂ.8ರಂದು ಬೆಳಿಗ್ಗೆ 8.30 ಧ್ವಜಾರೋಹಣ ನೆರವೇರಿಸಿದ ನಂತರ 9ಗಂಟೆಗೆ ಬಸವ ವೃತ್ತದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುವುದು. ಸಮ್ಮೇಳನ ಉದ್ಘಾಟನೆಯಾದ ನಂತರ ವಿಚಾರಗೋಷ್ಠಿಗಳು, ಕವಿಗೋಷ್ಠಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ, ಬಹಿರಂಗ ಅಧಿವೇಶನ,  ಸಮಾರೋಪ ಸಮಾರಂಭ ನಡೆಯುವವು. ನಂತರ ಹಾಸ್ಯ ಸಂಜೆ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗುವವು ಎಂದು ತಿಳಿಸಿದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶಾಸಕ ಜಿ.ಹಂಪಯ್ಯ ನಾಯಕ, ಎ.ಬಾಲಸ್ವಾಮಿ ಕೊಡ್ಲಿ, ಕಸಾಪ ಪದಾಧಿಕಾರಿಗಳಾದ ಶ್ರೀಶೈಲಗೌಡ, ಹಂಪಣ್ಣ ಚೆಂಡೂರು ಶರಣಪ್ಪ, ಪುರಸಭೆ ಸದಸ್ಯ ಹುಸೇನ್ ಬೇಗ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.