ಸಿಂಧನೂರು: ‘ರೈತರು ಬೆಳೆದ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಸಂಪೂರ್ಣ ಜೋಳ ಖರೀದಿಸುವ ವಿಷಯಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಜೂ.5 ರಂದು ನಡೆಯುವ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ರೈತರ ಪರವಾಗಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದರು.
ಮಂಗಳವಾರ ಸಂಜೆ ದೂರವಾಣಿ ಕರೆಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ನಿಯೋಗ ತೆರಳಿ ಬೆಂಗಳೂರಿನ ವಸಂತನಗರದಲ್ಲಿರುವ ಆಹಾರ ಭವನದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಸಚಿವರು ಭರವಸೆ ನೀಡಿದ್ದಾರೆಂದು ಅವರು ಹೇಳಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ರಾಜ್ಯದ ಅನ್ನದ ಬಟ್ಟಲಾಗಿದೆ. ರಾಜ್ಯದ ಒಟ್ಟು ಭತ್ತದ ಉತ್ಪಾದನೆಯಲ್ಲಿ ಇದೇ ಪ್ರದೇಶದಲ್ಲಿ ಅರ್ಧ ಉತ್ಪಾದನೆಯಾಗುತ್ತಿದೆ. ಹಾಗೆಯೇ ಜೋಳದ ಬೆಳೆಯೂ ರಾಜ್ಯದ ಉತ್ಪಾದನೆಯಲ್ಲಿ ಅರ್ಧ ಭಾಗ ಇದೇ ಪ್ರದೇಶದಲ್ಲಿಯೇ ಉತ್ಪಾದನೆ ಯಾಗುತ್ತಿದೆ ಎಂದರು.
‘ಹೈಬ್ರೀಡ್ ಜೋಳ ಊಟಕ್ಕೆ ಯೋಗ್ಯವಾಗಿದೆ. ಅದನ್ನೇ ನಾವು ಊಟ ಮಾಡುತ್ತೇವೆ. ಸಾಧ್ಯವಾದರೆ ಜಂಟಿ ಸಮೀಕ್ಷೆ ನಡೆಸಿ ಖಚಿತ ಪಡಿಸಿಕೊಳ್ಳಬಹುದು. ಈಗ ತಾಲ್ಲೂಕಿನಲ್ಲಿರುವ ಜೋಳದಲ್ಲಿ ನುಶಿ ಬಂದಿರುವುದಕ್ಕೆ ಸರ್ಕಾರದ ವಿಳಂಬ ನೀತಿಯೇ ಕಾರಣವಾಗಿದೆ. ಕೇಂದ್ರೀಯ ಉಗ್ರಾಣದ ಅಧಿಕಾರಿಗಳನ್ನು ಬದಲಿಸಿ ರಾಜ್ಯ ಉಗ್ರಾಣದ ಅಧಿಕಾರಿಗಳಿಗೆ ಜೋಳ ಖರೀದಿ ನಿರ್ವಹಣೆ ವಹಿಸುವಂತೆ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.
ಖರೀದಿ ಕೇಂದ್ರಕ್ಕೆ ಹಾಕುವ ಜೋಳ ಗುಣಮಟ್ಟದ್ದಾಗಿರಬೇಕು ಎಂದು ಸಚಿವರು ಹೇಳಿದ್ದಾರೆ. ಅದಕ್ಕೆ ತಾವು ಸಮ್ಮತಿಸಿರುವುದಾಗಿ ಹನುಮನಗೌಡ ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತೆ ಜೋತ್ನ್ಸಾ, ಜನರಲ್ ಮ್ಯಾನೇಜರ್ ಮಂಜುನಾಥ, ಕರ್ನಾಟಕ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕ್ರಾಂತಿ, ಮಾರುಕಟ್ಟೆ ಮಂಡಳಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ, ಕೃಷಿ ಮಾರಾಟ ಮಂಡಳಿಯ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ, ಮುಖಂಡರಾದ ಮಲ್ಲೇಶಗೌಡ ಬಸಾಪುರ, ಚನ್ನಬಸವ ಬೂದಿವಾಳ, ರಂಗಾಪುರ ಮಲ್ಲನಗೌಡ, ವಿರೂಪಾಕ್ಷಿ ಉಪಸ್ಥಿತರಿದ್ದರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.