ADVERTISEMENT

ಕಠಿಣ ಪರಿಸ್ಥಿತಿಯಲ್ಲೂ ಸಾಧಿಸುವ ಛಲ ಇರಲಿ

ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯ ಡಾ.ರೋಶನ್‌ ಜಹಾನ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 12:50 IST
Last Updated 10 ಜುಲೈ 2019, 12:50 IST
ರಾಯಚೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲೆಯ ಉರ್ದು ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯೆ ಡಾ.ರೋಶನ್‌ ಜಹಾನ್‌ ವಿಶೇಷ ಉಪನ್ಯಾಸ ನೀಡಿದರು
ರಾಯಚೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲೆಯ ಉರ್ದು ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯೆ ಡಾ.ರೋಶನ್‌ ಜಹಾನ್‌ ವಿಶೇಷ ಉಪನ್ಯಾಸ ನೀಡಿದರು   

ರಾಯಚೂರು: ಜೀವನದಲ್ಲಿ ಯಾವುದೇ ಕಠಿಣ ಸನ್ನಿವೇಶ ಎದುರಾದರೂ ಶೈಕ್ಷಣಿಕವಾಗಿ ಸಾಧಿಸಬೇಕೆನ್ನುವ ಛಲವನ್ನು ವಿದ್ಯಾರ್ಥಿಗಳು ಕೈಬಿಡಬಾರದು. ದೇವರ ಮೇಲೆ ನಂಬಿಕೆ ಮತ್ತು ಆತ್ಮವಿಶ್ವಾಸವಿದ್ದರೆ ಬಡತನವು ಸಿರಿತನವಾಗಿ ಬದಲಾಗುತ್ತದೆ ಎಂದು ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯೆ ಡಾ.ರೋಶನ್‌ ಜಹಾನ್‌ ಸಲಹೆ ನೀಡಿದರು.

ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ರಾಯಚೂರು ಜಿಲ್ಲೆಯ ಉರ್ದು ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮಕ್ಕಳು ಸಾಧನೆ ಮಾಡುವುದಕ್ಕೆ ಪಾಲಕರು ಪ್ರೇರೆಪಿಸಬೇಕು. ಸಾಧಿಸುವ ಛಲ ಇಟ್ಟುಕೊಂಡು ಓದು ಮುಂದುವರಿಸಿದರೆ, ಖಂಡಿತವಾಗಿಯೂ ಸಹಾಯ ಮಾಡುವವರು ಬೇಕಾದಷ್ಟು ಜನರಿದ್ದಾರೆ. ಆದರೆ, ನಿಶ್ಚಲ ಓದು ಮತ್ತು ಗುರಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ ಎಂದು ತಿಳಿಸಿದರು.

ADVERTISEMENT

‘ನಾನು ಮುಂಬೈನಲ್ಲಿ ಪಿಯುಸಿ ವಿಜ್ಞಾನ ಮೊದಲ ವರ್ಷ ಓದುವುದಕ್ಕೆ ಕಾಲೇಜಿಗೆ ಹೋಗಿ ಬರುವ ಸಂದರ್ಭದಲ್ಲಿ 2008ರಲ್ಲಿ ಆಕಸ್ಮಿಕವಾಗಿ ಲೋಕಲ್‌ ಟ್ರೇನ್‌ನಿಂದ ಕೆಳಗೆ ಬಿದ್ದು ಎರಡೂ ಕಾಲುಗಳು ಕತ್ತರಿಸಿ ಹೋದವು. ಎಂಬಿಬಿಎಸ್‌ ಓದಿ ವೈದ್ಯಳಾಗಬೇಕು ಎನ್ನುವ ನನ್ನ ಕನಸು ನುಚ್ಚು ನೂರಾಯಿತು ಎಂದು ರೋದಿಸಿದೆ’ ಎಂದರು.

‘ಆದರೆ, ಕಾಲು ಕತ್ತರಿಸಿ ಹೋದಾಗ ಚಿಕಿತ್ಸೆ ನೀಡಿದ ಡಾ. ಸಂಜಯ ಕಂಠಾರಿಯಾ ಅವರು ಆತ್ಮವಿಶ್ವಾಸ ತುಂಬಿದರು. ಕೃತಕ ಕಾಲುಗಳನ್ನು ಜೋಡಿಸಿಕೊಂಡು ಓದು ಮುಂದುವರಿಸಲು ಸೂಚಿಸಿದರು. ಕಾಲುಗಳು ಇಲ್ಲದಿದ್ದರೂ ಬುದ್ಧಿಗೆ ಏನೂ ಆಗಿಲ್ಲ ಎನ್ನುವ ಮಾತುಗಳನ್ನು ತಾಯಿ ಹೇಳಿದಳು. ತಂದೆ ತರಕಾರಿ ಮಾರಾಟ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಇಂತಹ ಸನ್ನಿವೇಶದಲ್ಲೂ ವೈದ್ಯಳಾಗುವ ಕನಸು ನನಸು ಮಾಡಿಕೊಂಡೆ. ಪ್ರತಿ ಹಂತದಲ್ಲೂ ತೊಂದರೆಗಳು ಎದುರಾದರೂ ದೇವರ ಮೇಲಿರುವ ವಿಶ್ವಾಸ ಕಳೆದುಕೊಳ್ಳಲಿಲ್ಲ. ಕಷ್ಟವನ್ನು ಸಲೀಸಾಗಿ ಎದುರಿಸಿದೆ’ ಎಂದು ಹೇಳಿದರು.

ಶೇ 90 ರಷ್ಟು ಅಂಗವಿಕಲೆಯಾಗಿದ್ದರೂ ವೈದ್ಯಕೀಯ ಸೀಟಿನಲ್ಲಿ ಮೀಸಲಾತಿ ನಿರಾಕರಿಸಲಾಗಿತ್ತು. ಹಿರಿಯರ ಸಲಹೆ ಪಡೆದು ಮುಂಬೈ ಹೈಕೋರ್ಟ್‌ಗೆ ಅರ್ಜಿ ಹಾಕಿದೆ, ಕೂಡಲೇ ಪ್ರವೇಶ ಸಿಕ್ಕಿತ್ತು. ಎಂ.ಡಿ ಫೆಥಾಲಜಿ ಪ್ರವೇಶಕ್ಕೂ ತೊಂದರೆ ಆಗಿತ್ತು. ಶೇ 90 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಂಗವಿಕಲರಾಗಿದ್ದರೆ ಮಾತ್ರ ಎಂಡಿಯಲ್ಲಿ ಮೀಸಲಾತಿ ಎನ್ನುವ ನಿಯಮವಿತ್ತು. ಆದರೆ, ನಾನು ಕೋರ್ಟ್‌ ಮೊರೆ ಹೋಗುವುದಕ್ಕೆ ಸಿದ್ಧವಾದಾಗ, 2010 ರಲ್ಲಿ ಕೇಂದ್ರದ ಆರೋಗ್ಯ ಸಚಿವರು ಎರಡು ದಿನಗಳಲ್ಲಿ ನಿಯಮ ಬದಲಿಸಿ ಶೇ 50 ಕ್ಕಿಂತ ಹೆಚ್ಚು ಅಂಗವಿಕಲರಾಗಿದ್ದರೆ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಕಲ್ಪಿಸುವಂತೆ ನಿಯಮ ಬದಲಿಸಿದರು. ನನ್ನ ಮೂಲಕ ಬೇರೆ ಅಂಗವಿಕಲರಿಗೂ ಓದಲು ಅವಕಾಶ ದೊರೆಯಿತು. ವಿಶ್ವಾಸ ಕಳೆದುಕೊಂಡಿದ್ದರೆ ಏನನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಶೈಕ್ಷಣಿಕ ಸಾಧನೆ ಮಾಡುವುದಕ್ಕೆ ನನ್ನ ಜೀವನವೇ ಒಂದು ಮಾದರಿಯಾಗಿದ್ದೇನೆ’ ಎಂದು ಹೇಳಿದರು.

ಎಂ.ಕೆ. ಭಂಡಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಹ್ಮದ್‌ ರಿಯಾಜುದ್ದೀನ್‌ ಮಾತನಾಡಿ, ಶಿಕ್ಷಣದಿಂದ ಸಾಧನೆ ಮಾಡಿದವರು ಸಮಾಜದಲ್ಲಿ ಸಾಕಷ್ಟಿದ್ದಾರೆ. ಅವರ ಜೀವನ ತಿಳಿದುಕೊಳ್ಳಬೇಕು. ಕಷ್ಟದ ಸನ್ನಿವೇಶದಲ್ಲಿ ಡಾ.ರೋಶನ್‌ ಅವರಂತಹ ವೈದ್ಯರನ್ನು ನೋಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ. ವಹೀದ್‌ ವಾಜದ್‌, ನೂರೆ ದರಿಯಾ ಸಜ್ಜಾದ ನಶಿನ್‌ ಡಾ. ಸೈಯದ್‌ ಶಹಾ ತಾಜುದ್ದೀನ್‌ ಮಾತನಾಡಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರು, ಸಮಾಜ ಸೇವಕ ಮಹ್ಮದ್‌ ಮಝರ್‌ ಹುಸೇನ್‌, ಮತೀನ್‌ ಅನ್ಸಾರಿ, ಮಾನ್ವಿ ಉರ್ದು ಪ್ರೌಢಶಾಲೆಯ ಎಸ್‌ಡಿಎಂಸಿ ಸೈಯದ್‌ ಇಕ್ಬಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.