
ಮಸ್ಕಿ: ‘ಅಧಿಕಾರಿಗಳು ಜವಾಬ್ದಾರಿ ಅರಿತು ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ತಲುಪಿಸಿದಾಗ ಮಾತ್ರ ಕ್ಷೇತ್ರಕ್ಕೂ, ಸರ್ಕಾರಕ್ಕೂ ಒಳ್ಳೆ ಹೆಸರು ಬರುತ್ತದೆ. ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಎಚ್ಚರಿಸಿದರು.
ತಾಲ್ಲೂಕಿನ ಹೂವಿಭಾವಿ ಗ್ರಾಮದ ಬೆಟ್ಟದಲ್ಲಿರುವ ಗವಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮಾತನಾಡಿದರು.
ಕೃಷಿ ಭಾಗ್ಯ ಯೋಜನೆಯಲ್ಲಿ ಗುರಿ ಎಂಟು ಇದ್ದರೂ ಕೇವಲ ಮೂರು ಸಾಧಿಸಲಾಗಿದೆ. ಈ ನಿರ್ಲಕ್ಷ್ಯಕ್ಕೆ ಕಾರಣವೇನು? ಕೃಷಿ ಇಲಾಖೆಯಲ್ಲಿ ಸ್ಥಳೀಯ ಸಿಬ್ಬಂದಿಯನ್ನು ಬದಲಾಯಿಸಿ, ಮಸ್ಕಿಯ ರೈತ ಸಂಪರ್ಕ ಕೇಂದ್ರವನ್ನು ಈ ಹಿಂದಿನ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆಯ ಕಾರ್ಯವೈಖರಿಯನ್ನೂ ಕಟುವಾಗಿ ಟೀಕಿಸಿದ ಅವರು,‘ವೈದ್ಯರ ನಿರ್ಲಕ್ಷ್ಯದಿಂದ ಬಡ ರೋಗಿಗಳು ಚಿಕಿತ್ಸೆ ಪಡೆಯದೆ ಹೊರಗಡೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ತಾಲ್ಲೂಕು ವೈದ್ಯಾಧಿಕಾರಿಗಳು ತಿಂಗಳಿಗೆ ಕನಿಷ್ಠ ಎರಡು ಬಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.
‘ಶಾಲೆಗಳಲ್ಲಿನ ಶಿಕ್ಷಣ ಗುಣಮಟ್ಟ ಹೆಚ್ಚಿಸಿ ಉತ್ತಮ ಫಲಿತಾಂಶ ತರಲು ಶ್ರಮಿಸಬೇಕು. ಬಿಸಿಯೂಟದ ಆಹಾರದ ಗುಣಮಟ್ಟ, ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಮೇಲೂ ವಿಶೇಷ ಗಮನಹರಿಸಬೇಕು’ ಎಂದು ಸೂಚಿಸಿದರು.
ವಿವಿಧ ವಸತಿ ನಿಲಯಗಳು ಹಾಗೂ ಮೊರಾರ್ಜಿ ವಸತಿ ಶಾಲೆಗಳ ಕುರಿತು ಹೆಚ್ಚಾಗಿ ದೂರುಗಳು ಬರುತ್ತಿರುವುದನ್ನು ಉಲ್ಲೇಖಿಸಿದ ಶಾಸಕರು,‘ವಾರ್ಡನ್‌ಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಹೇಳಿದರು.
‘ಗವಿಸಿದ್ದೇಶ್ವರ ದೇವಸ್ಥಾನದ ಬೆಟ್ಟದ ಪ್ರದೇಶದಲ್ಲಿ ಹೆಚ್ಚಿನ ಅರಣ್ಯೀಕರಣಕ್ಕೆ ಮುಂದಾಗಬೇ ಕು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತಹಶೀಲ್ದಾರ್ ಮಂಜುನಾಥ ಬೋಗಾವತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮೈಬೂಸಾಬ ಮುದ್ದಾಪುರ, ಕೆಡಿಪಿ ಸದಸ್ಯರಾದ ಬಸವಂತಪ್ಪ ಮಟ್ಟೂರು, ದೇವಪ್ಪ ರಾಠೋಡ, ಕರಿಯಪ್ಪ ಹಾಲಾಪುರ, ರಾಜೇಶ್ವರಿ ಬಿ.ನಾಯಕ ಸೇರಿ ಅಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ಪ್ರತಿ ಕೆಡಿಪಿ ಸಭೆಯನ್ನು ಒಂದೊಂದು ಕ್ಷೇತ್ರದಲ್ಲಿ ಮಾಡುವುದರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಅಧಿಕಾರಿಗಳು ಇಡೀ ದಿನ ಮೊಬೈಲ್ ಇಲ್ಲದೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ.– ಅಮರೇಶ ಯಾದವ, ಇಒ ತಾಲ್ಲೂಕು ಪಂಚಾಯಿತಿ ಮಸ್ಕಿ
‘ಜಾಗ ಭೂಸ್ವಾಧೀನ’
ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ಇರುವ ನಾಲ್ಕು ಎಕರೆ ಜಾಗವನ್ನು ಸರ್ಕಾರದ ನಿಯಮಾನುಸಾರ ಜಿಲ್ಲಾಧಿಕಾರಿ ಅಧಿಕೃತವಾಗಿ ಭೂಸ್ವಾಧೀನ ಮಾಡಿಕೊಂಡಿ ದ್ದಾರೆ. ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆ ಕುರಿತ ಚರ್ಚೆ ಸಂದರ್ಭದಲ್ಲಿ ಈ ವಿಚಾರ ಖಚಿತಪಡಿಸಿದ ಶಾಸಕ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ‘ಭೂಸ್ವಾಧೀನದ ಮಾಹಿತಿ ಇಲ್ಲದಿದ್ದರೆ ಹೇಗೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದೇ ವೇಳೆ ಮಸ್ಕಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.