ADVERTISEMENT

ಮಾನ್ವಿ: ಬಾಲಕರ ಕಾಲೇಜಿನಲ್ಲಿ ಬಾಲಕಿಯರಿಗೆ ಪ್ರವೇಶ

ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 6:35 IST
Last Updated 5 ಜೂನ್ 2025, 6:35 IST
ಮಾನ್ವಿ ಪಟ್ಟಣದ ಬಾಲಕರ ಸರ್ಕಾರಿ ಪಿಯು ಕಾಲೇಜಿನ ಹೊರನೋಟ
ಮಾನ್ವಿ ಪಟ್ಟಣದ ಬಾಲಕರ ಸರ್ಕಾರಿ ಪಿಯು ಕಾಲೇಜಿನ ಹೊರನೋಟ   

ಮಾನ್ವಿ: ಪಟ್ಟಣದ ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಲಕಿಯರಿಗೆ ಪ್ರಥಮ ವರ್ಷದ ತರಗತಿಗೆ ಉಚಿತ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ.

ಸುಮಾರು ಐವತ್ತು ವರ್ಷಗಳ ಇತಿಹಾಸ ಹೊಂದಿರುವ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಎರಡು ದಶಕದ ಹಿಂದೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಬಾಲಕರ ಸರ್ಕಾರಿ ಪಿಯು ಕಾಲೇಜು ಆಗಿ ಪರಿವರ್ತನೆಯಾಗಿತ್ತು. ಪಿಯುಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಹೊಂದಿರುವ ಈ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕೆಲ ವರ್ಷಗಳಿಂದ ನಿರಂತರವಾಗಿ ಕುಸಿದಿದೆ.

ಸರ್ಕಾರ ಸುಸಜ್ಜಿತ ಕಟ್ಟಡ, ಸ್ಮಾರ್ಟ್ ಬೋರ್ಡ್ ಮೂಲಕ ಡಿಜಿಟಲ್ ಬೋಧನಾ ವ್ಯವಸ್ಥೆ, ಉಚಿತ ಸಿಇಟಿ ತರಬೇತಿ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಗೆ ಪ್ರಥಮ ಪಿಯುಸಿಗೆ ಕೇವಲ 60 ಹಾಗೂ ದ್ವಿತೀಯ ಪಿಯುಸಿಗೆ 93 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದರು. ಕಾರಣ ಪ್ರಾಂಶುಪಾಲ ಕುಂಟೆಪ್ಪ ಗೌರಿಪುರ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು 2025-26ನೇ ಶೈಕ್ಷಣಿಕ ಸಾಲಿನಿಂದ ಬಾಲಕಿಯರಿಗೂ ಈ ಕಾಲೇಜಿನಲ್ಲಿ ಪ್ರವೇಶ ನೀಡಲು ಅನುಮತಿ ಪಡೆದಿದ್ದಾರೆ.

ADVERTISEMENT

ಬಾಲಕಿಯರಿಗೆ ಪ್ರಥಮ ಪಿಯುಸಿ ಪ್ರವೇಶ ಶುಲ್ಕ ₹225, ದ್ವಿತೀಯ ಪಿಯುಸಿ ಪ್ರವೇಶ ಶುಲ್ಕ ₹250 ಇದೆ.

ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ತರಗತಿಗಳಿಗೆ ಹೊಸದಾಗಿ ಪ್ರವೇಶ ಪಡೆಯುವ ಎಲ್ಲ ಬಾಲಕಿಯರ ಪ್ರವೇಶ ಶುಲ್ಕವನ್ನು ಪ್ರಾಂಶುಪಾಲ ಹಾಗೂ ಉಪನ್ಯಾಸಕರು ತಮ್ಮ ವೈಯಕ್ತಿಕ ಹಣದಿಂದ ಭರಿಸಲು ತೀರ್ಮಾನಿಸಿದ್ದಾರೆ. ಈ ವರ್ಷ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯುವುದು ಅವರ ಗುರಿಯಾಗಿದೆ. ಕಾರಣ ಎಲ್ಲ ಉಪನ್ಯಾಸಕರು ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿರುವ ಪ್ರೌಢಶಾಲೆಗಳಿಗೆ ತೆರಳಿ ಕಾಲೇಜಿನ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಪಾಸಾಗಿರುವ ವಿದ್ಯಾರ್ಥಿಗಳ ಪಾಲಕರನ್ನು ಕೂಡ ಭೇಟಿಯಾಗಿ ಮನವೊಲಿಸುತ್ತಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಲಕಿಯರ ಪ್ರವೇಶಕ್ಕೆ ಅನುಮತಿ ಪಡೆಯಲಾಗಿದೆ. ವಿದ್ಯಾರ್ಥಿಗಳ ಹೆಚ್ಚಿನ ದಾಖಲಾತಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ.
– ಕುಂಟೆಪ್ಪ ಗೌರಿಪುರ, ಪ್ರಾಂಶುಪಾಲ ಬಾಲಕರ ಸರ್ಕಾರಿ ಪಿಯು ಕಾಲೇಜು ಮಾನ್ವಿ
ಕಾಲೇಜಿನ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಜನಪ್ರತಿನಿಧಿಗಳು ಗಮನಹರಿಸಬೇಕು.
– ಶ್ರೀಕಾಂತ ಪಾಟೀಲ ಗೂಳಿ, ಸಾಮಾಜಿಕ ಕಾರ್ಯಕರ್ತ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.