ADVERTISEMENT

ರಾಯಚೂರು: ಮೊದಲ ದಿನವೇ ಸೇನಾ ನೇಮಕಾತಿ ರ‍್ಯಾಲಿ ಸುಲಲಿತ

ಕೊಪ್ಪಳ ಜಿಲ್ಲೆಯ 587 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:48 IST
Last Updated 9 ಆಗಸ್ಟ್ 2025, 6:48 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಕೊಪ್ಪಳದ ಯುವಕರು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಕೊಪ್ಪಳದ ಯುವಕರು   

ರಾಯಚೂರು: ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯು ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗಿನ ಜಾವ ಸುಲಲಿತವಾಗಿ ಆರಂಭವಾಯಿತು. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಮೊದಲೇ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲ.

ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಯುವಕರಿಗೆ ಜಿಲ್ಲಾಡಳಿತ ನಗರದ ವಿವಿಧೆಡೆ ವಸತಿ ನಿಲಯಗಳಲ್ಲಿ ಉಳಿದುಕೊಳ್ಳಲು ಉಚಿತ ವ್ಯವಸ್ಥೆ ಮಾಡಿದ್ದರೂ ಮಾಹಿತಿ ಕೊರತೆ ಹಾಗೂ ಕೆಲ ಯುವಕರು ತಡ ರಾತ್ರಿ ಬಂದ ಕಾರಣ ಲಿಂಗಸುಗೂರು ರಸ್ತೆಯಲ್ಲಿರುವ ಕಾಂಪ್ಲೆಕ್ಸ್‌ಗಳ ಮುಂದೆ ಮಲಗಿ ರ್‍ಯಾಲಿಗೆ ಹಾಜರಾದರು.

ಬೆಳಗಿನ ಜಾವ 3 ಗಂಟೆಯ ವೇಳೆಗೆ ಆಗಮಿಸಿದ್ದ ಪೊಲೀಸರು ವಿಶ್ವವಿದ್ಯಾಲಯದ ಪ್ರವೇಶ ದ್ವಾರ ಹಾಗೂ ಕ್ರೀಡಾಂಗಣದಲ್ಲಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು. ಪಶ್ಚಿಮ ಠಾಣೆಯ ಪೊಲೀಸರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು.

ADVERTISEMENT

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಪೆಂಡಾಲ್ ಹಾಕಲಾಗಿದೆ. ದೈಹಿಕ ಪರೀಕ್ಷೆ, ವೈದ್ಯಕೀಯ ಹಾಗೂ ದಾಖಲೆಗಳ ಪರಿಶೀಲನೆ ಪೆಂಡಾಲ್‌ನಲ್ಲೇ ನಡೆಯಿತು. ಕ್ರೀಡಾಂಗಣದಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿತ್ತು. ಅಭ್ಯರ್ಥಿಗಳು ಸರತಿ ಸಾಲಿನಲ್ಲಿ ಬರುವಂತೆ ಮಾಡಲು ಬ್ಯಾರಿಕೇಡ್ ಅಳವಡಿಸಲಾಗಿತ್ತು.

ಗುರುವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಅವಧಿಗೆ ಮಳೆ ಅಬ್ಬರಿಸಿದ ಕಾರಣ ಮೈದಾನದ ಸುತ್ತಮುತ್ತ ನೀರು ನಿಂತುಕೊಂಡಿತ್ತು. ರನ್ನಿಂಗ್‌ ಟ್ರ್ಯಾಕ್‌ನಲ್ಲಿ ಕೆಸರು ಉಂಟಾಗಿ ಅಭ್ಯರ್ಥಿಗಳು ಸ್ವಲ್ಪ ಮಟ್ಟಿಗೆ ತೊಂದರೆ ಅನುಭವಿಸಬೇಕಾಯಿತು.

ಬೆಳಿಗ್ಗೆ 6 ಗಂಟೆಗೆ ಜಿಲ್ಲಾಧಿಕಾರಿ ನಿತೀಶ್ ಧ್ವಜ ಹಾರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು.

ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಸೇನಾ ಭರ್ತಿ ರ್‍ಯಾಲಿಯಲ್ಲಿ ಪಾಲ್ಗೊಂಡ ಯುವಕರಿಗೆ ಶುಭ ಹಾರೈಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ, ತಹಶೀಲ್ದಾರ್ ಅಮರೇಶ ಬಿರಾದಾರ, ಜಿಲ್ಲಾ ನೋಡಲ್‌ ಅಧಿಕಾರಿ ಕೃಷ್ಣ ಶಾವಂತಗೇರಿ, ಸೇನೆಯ ಬೆಳಗಾವಿಯ ನೇಮಕಾತಿ ವಿಭಾಗದ ಅಧಿಕಾರಿಗಳಾದ ಎಸ್‌.ಕೆ.ಸಿಂಗ್, ಎ.ಕೆ.ಉಪಾಧ್ಯ ಹಾಜರಿದ್ದರು.

ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಗಳು ಪುಲ್‌ಅಪ್‌ ಸಾಮರ್ಥ್ಯ ಪ್ರದರ್ಶಿಸಿದರು
ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಯೊಬ್ಬರು ಉದ್ದ ಜಿಗಿತದಲ್ಲಿ ಹಾರಿದ ಕ್ಷಣ
ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಗಳು ಜಿಗ್‌ಜಾಗ್‌ನಲ್ಲಿ ಸಾಗಿ ಸಮತೋಲನ ಕಾಯ್ದುಕೊಂಡರು
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಯುವಕರು ಸೇನೆ ಸೇರಲು ಅವಕಾಶ ಬಂದೊದಗಿದೆ. ಯುವಕರು ಸಮರ್ಥವಾಗಿ ಅವಕಾಶ ಬಳಸಿಕೊಳ್ಳಬೇಕು
ಡಾ.ಶಿವರಾಜ ಪಾಟೀಲ ನಗರ ಶಾಸಕ

ಉಚಿತ ವಸತಿ ಊಟದ ವ್ಯವಸ್ಥೆ:

ಅಭ್ಯರ್ಥಿಗಳಿಗೆ ಉಚಿತ ವಸತಿ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತ ಶ್ರೀಈಶ್ವರ ದೇವಸ್ಥಾನ ಸಮಿತಿ ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು ಉಚಿತ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಿ ಸೇನೆ ಸೇರ ಬಯಸುತ್ತಿರುವ ಯುವಕರಿಗೆ ನೆರವಾದರು. ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣದಿಂದ ವಸತಿ ನಿಲಯಗಳಿಗೆ ತೆರಳಲು ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ನೋಡಲ್‌ ಅಧಿಕಾರಿಗಳು ವಸತಿ ನಿಲಯದ ವಾರ್ಡನ್‌ಗಳೊಂದಿಗೆ ಸಮನ್ವಯ ಸಾಧಿಸಿ ಅಭ್ಯರ್ಥಿಗಳು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣಕ್ಕೆ ಸಮಯಕ್ಕೆ ಸರಿಯಾಗಿ ಬರುವಂತೆ ವ್ಯವಸ್ಥೆ ಮಾಡಿದರು. ಅಧಿಕಾರಿಗಳು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಕ್ಕೆ ಸೇನೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.