
ರಾಯಚೂರು: ‘ಕೃಷಿ ಕ್ಷೇತ್ರ ಇಂದು ತನ್ನ ವಿಸ್ತಾರವನ್ನು ವ್ಯಾಪಿಸಿಕೊಂಡಿದೆ. ನವ–ನವೀನ ತಂತ್ರಜ್ಞಾನಗಳ ಅವಿಷ್ಕಾರವಾಗಿದೆ. ಮುಖ್ಯವಾಗಿ ಕೃಷಿ ತಂತ್ರಜ್ಞರಿಲ್ಲದ ಕೃಷಿ ಕ್ಷೇತ್ರ ಅಪೂರ್ಣ’ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಅಭಿಪ್ರಾಯಪಟ್ಟರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಜರುಗಿದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಹಳೆಯ ಕೃಷಿ ಡಿಪ್ಲೋಮಾ ಮತ್ತು ಬಿಟೆಕ್ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷಿ ಶಿಕ್ಷಣದಲ್ಲಿ ಇತ್ತೀಚಿಗೆ ತಾಂತ್ರಿಕತೆಗೆ ಹೆಚ್ಚಿನ ಮಹತ್ವ ಪಡೆದಿದ್ದು ಕೃಷಿ ತಂತ್ರಜ್ಞರ ಕೊಡುಗೆ ಅಪಾರವಾಗಿದೆ. ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸಿದ್ದು ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದರು.
‘ಮುಖ್ಯವಾಗಿ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಯಂತ್ರೋಪಕರಣ ಆಹಾರ ತಂತ್ರಜ್ಞಾನ ಮತ್ತು ಮಾರುಕಟ್ಟೆಯಲ್ಲಿ ಅಪಾರ ಅವಕಾಶಗಳಿದ್ದು ಅವುಗಳನ್ನು ಕೃಷಿ ತಾಂತ್ರಿಕ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಸ್ಟಾರ್ಟ್ ಅಪ್ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಮ್ಮ ಜ್ಞಾನವನ್ನು ಅನಾವರಣ ಮಾಡಿಕೊಳ್ಳಲು ವಿಶ್ವವಿದ್ಯಾಲಯ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ’ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಎಂ.ವೀರನಗೌಡ ಮಾತನಾಡಿ, ‘ಹಳೆಯ ವಿದ್ಯಾರ್ಥಿಗಳು ಆಗಾಗ ಸೇರಿ ಕೃಷಿ ಕ್ಷೇತ್ರದ ಆಗುಹೊಗುಗಳ ಬಗ್ಗೆ ಚರ್ಚಿಸಬೇಕಾದ ಅಗತ್ಯತೆ ಇದೆ. ಮುಖ್ಯವಾಗಿ ಮೆಕನೈಜೇಶನ್ ಡಿಜಿಟಲ್, ಅಟೋಮೇಶನ್, ಆರ್ಟಿಫಿಶಿಯಲ್ ಇಂಟಲಿಜನ್ಸ್ ಮುಂತಾದ ಅವಿಷ್ಕಾರಗಳು ಕೃಷಿ ಕೇತ್ರದಲ್ಲಿ ಬರುತ್ತಿರುದರಿಂದ ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸರ್ವಸನ್ನದ್ಧರಾಗಬೇಕು’ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಡಿ.ಮಲ್ಲಿಕಾರ್ಜುನ ಮಾತನಾಡಿದರು. ಡಾ. ಉದಯಕುಮಾರ ನಿಡೋಣಿ ಪ್ರಾಸ್ತಾವಿಕ ಭಾಷಣ ಮಾಡಿದರು , ಹಳೆಯ ವಿದ್ಯಾರ್ಥಿಗಳ ಸಂಘದ ಸಾಧನೆ ಮತ್ತು ಕಾರ್ಯಚಟುವಟಿಕೆಗಳ ವರದಿಯನ್ನು ಡಾ. ವಿಜಯಕುಮಾರ ಪಲ್ಲೇದ ವಾಚಿಸಿದರು.ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾದ್ಯಾಪಕರಾದ ಡಾ. ನಾಗರಾಜ ಡಾ.ಎಂ. ನೇಮಿಚಂದಪ್ಪ, ಡಾ.ಬಸವರಾಜ ಪೋಲಿಸ್ ಗೌಡರ್, ಡಾ.ಸತೀಶ್‌ಕುಮಾರ ಯು, ಕೃಷಿ ತಾಂತ್ರಿಕ ಮಹಾವಿದ್ಯಾಲಯದ, ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಶರಣಗೌಡ ಹಿರೇಗೌಡ ಸ್ವಾಗತಿಸಿದರು. ವಂದನಾರ್ಪಣೆಯನ್ನು ಜಿ ನೀಲಕಂಠಯ್ಯ ನಿರ್ವಹಿಸಿದರು.
- ‘ವಿವಿಧ ಇಲಾಖೆಯ ಮುಖ್ಯಸ್ಥರಿಗೆ ಮನವಿ
’ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಮಲ್ಲಿಕಾರ್ಜುನ ಎಸ್.ಅಯ್ಯನಗೌಡ ಮಾತನಾಡಿ ‘ಹಳೆಯ ಸಾಧಕ ವಿದ್ಯಾರ್ಥಿಗಳು ಮುಂದಿನ ಕೃಷಿ ತಾಂತ್ರಿಕ ಪದವಿಧರರಿಗೆ ಮಾರ್ಗದರ್ಶನ ನೀಡಬೇಕಾಗಿದೆ. ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಈ ಸ್ನೇಹ ಸಮ್ಮೇಳನದಲ್ಲಿ ರೈತ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಲಿ. ಮುಖ್ಯವಾಗಿ ಕೃಷಿ ತಾಂತ್ರಿಕ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಿಗಬೇಕಾದ ಅವಕಾಶಗಳ ಕುರಿತು ಸರ್ಕಾರದ ವಿವಿಧ ಇಲಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಗುವದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.