ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೃಷಿ ಸಂಬಂಧಿತ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದ ಮೂರು ದಿನಗಳ ಕೃಷಿ ಮೇಳ ಸೋಮವಾರ ಮುಕ್ತಾಯಗೊಂಡಿತು.
ಮೊದಲ ದಿನ ಕೃಷಿ ಮೇಳಕ್ಕೆ ಸಾಮಾನ್ಯ ಪ್ರಮಾಣದಲ್ಲಿ ಜನ ಆಗಮಿಸಿದ್ದರು. ಭಾನುವಾರ ರೈತರು ಹಾಗೂ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ಮೇಳದಲ್ಲಿನ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಮಾಹಿತಿ ಪಡೆದರು.
ಅನೇಕ ರೈತರು ತಮಗೆ ಅನುಕೂಲವಿರುವ ಕೃಷಿ ಉಪಕರಣಗಳನ್ನು ಬುಕ್ ಮಾಡಿ ಹೋದರು. ಕೃಷಿ ಯಂತ್ರೋಪಕರಣಗಳ ನೆರವಿನಿಂದ ನಷ್ಟ ಕಡಿಮೆ ಮಾಡಿ ಹೆಚ್ಚಿನ ಲಾಭ ಪಡೆಯುವ ಬಗೆಯನ್ನು ಅರಿತುಕೊಂಡರು. ಆನೇಕ ಆಗ್ರೊ ಕಂಪನಿಗಳು ಸಹ ರೈತರಿಗೆ ಭರಪೂರ ಮಾಹಿತಿ ನೀಡಿದವು.
ಕೃಷಿ ಮೇಳದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟಶಾಸ್ತ್ರವಿಭಾಗ, ಎಳೆ ಹುಳು ಗೊಬ್ಬರ ವಿಭಾಗ, ಕೃಷಿ ಯಂತ್ರೋಪಕರಣಗಳ ವಿಭಾಗ, ಕೃಷಿ ವಿಜ್ಞಾನ ಕೇಂದ್ರ, ಸಿರಿಧಾನ್ಯ ವಿಭಾಗಗಳ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ರೈತರಿಗೆ ಅಗತ್ಯ ಮಾಹಿತಿ ಒದಗಿಸಿದವರು.
ಪ್ರಗತಿಪರ ರೈತರು ಹತ್ತಿ, ತೊಗರಿ, ಮೆಣಸಿಣಕಾಯಿ ಮೊದಲಾದ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಮಳಿಗೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಹೊಸ ತಳಿಗಳ ಬಗ್ಗೆಯೂ ಅರಿತುಕೊಂಡರು.
‘ಹವಾಮಾನ ವೈಪರೀತ್ಯಕ್ಕೆ ಸುಸ್ಥಿರ ಕೃಷಿ’ ಘೋಷವಾಕ್ಯದೊಂದಿಗೆ ಕೃಷಿ ಮೇಳ ಆಯೋಜಿಸಿದ್ದರಿಂದ ಕೃಷಿ ಇಲಾಖೆ ಅದಕ್ಕೆ ಪೂರಕವಾಗಿ ಕೃಷಿ ಹೊಂಡ ನಿರ್ಮಾಣ ಹಾಗೂ ನೀರಿನ ಸದ್ಬಳಕೆ ಕುರಿತು ಮಾಹಿತಿ ನೀಡಿದ್ದು ಜನರ ಮೆಚ್ಚುಗೆ ಪಾತ್ರವಾಯಿತು.
ರೇಷ್ಮೆ ಇಲಾಖೆಯು ರೇಷ್ಮೆ ಕೃಷಿ ಮೇಳದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ಒದಗಿಸಿದ್ದು, ಹೆಚ್ಚು ಗಮನ ಸೆಳೆಯಿತು. ತೋಟಗಾರಿಕೆ ಇಲಾಖೆಯು ಪುಷ್ಪಕೃಷಿ, ತೋಟಗಾರಿಕೆ ಬೆಳೆಗಳ ಮಾಹಿತಿ ಒದಗಿಸಿತು. ಜಿಲ್ಲೆಯಲ್ಲಿ ಬೆಳೆದ ತೋಟಗಾರಿಕೆ ಉತ್ಪನ್ನಗಳನ್ನೇ ಪ್ರದರ್ಶನದಲ್ಲಿ ಇಟ್ಟಿದ್ದರಿಂದ ಮಳಿಗೆಗೆ ಭೇಟಿ ಕೊಡುತ್ತಿದ್ದ ರೈತರು ಹಾಗೂ ಸಾರ್ವಜನಿಕರು ಆಸಕ್ತಿಯಿಂದ ಹೊಸ ತಳಿಗಳ ಮಾಹಿತಿ ಪಡೆದುಕೊಂಡರು. ಪುಷ್ಪ ಪ್ರದರ್ಶನವಂತೂ ಮಕ್ಕಳು ಆದಿಯಾಗಿ ಜನಮನ ರಂಜಿಸಿತು.
ಪಶು ಪಾಲನೆ ಇಲಾಖೆ ಜಾನುವಾರು ಪಾಲನೆಯ ಮಾಹಿತಿ ಒದಗಿಸಿತು. ಗುಜರಾತಿನ ಗಿರ್ ಎತ್ತು, ಆಕಳು, ಮಹಾರಾಷ್ಟ್ರದ ದೇವಣಿ, ಉತ್ತರ ಕರ್ನಾಟಕದ ಖಿಲಾರಿ ಎತ್ತು, ಮುರ್ರಾ ತಳಿಯ ಜಾನುವಾರುಗಳು, ರಾಜಸ್ಥಾನ ಮೂಲದ ಸಿರೋಹಿ ತಳಿಯ ಮೇಕೆ ಮೇಳದಲ್ಲಿ ಗಮನ ಸೆಳೆದವು.
ಹೆಚ್ಚು ಹಾಲು ಕೊಡುವ ಹಸು, ಎಮ್ಮೆ, ಮಾಂಸ ಉತ್ಪಾದನೆಗೆ ಅನುಕೂಲವಾಗಿರುವ ಕುರಿ ಮೇಕೆಗಳ ಬಗ್ಗೆಯೂ ರೈತರಿಗೆ ಮಾಹಿತಿ ಒದಗಿಸಲಾಯಿತು. ಸೋಮವಾರ ಕೃಷಿ ಮೇಳದಲ್ಲಿ ರೈತರ ಸಂಖ್ಯೆ ಕಡಿಮೆ ಇದ್ದರೂ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಕೃಷಿ ಮೇಳಕ್ಕೆ ಕರೆ ತಂದು ಕೃಷಿ ಕ್ಷೇತ್ರದಲ್ಲಿ ಆದ ಬದಲಾವಣೆಯನ್ನು ಪರಿಚಯಿಸಿದವು. ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕುತೂಹಲದಿಂದ ಪ್ರದರ್ಶನ ವೀಕ್ಷಿಸಿದರು.
ಕೃಷಿ ಮೇಳದ ಮುಖ್ಯ ವೇದಿಕೆಯಲ್ಲಿ ಸಂಗೀತ ಕಲಾವಿದರು ಹಾಗೂ ರಂಗ ಕಲಾವಿದರು ಅತ್ಯುತ್ತಮ ಕಾರ್ಯಕ್ರಮ ನೀಡುವ ಮೂಲಕ ಪ್ರೇಕ್ಷಕರ ಮನ ರಂಜಿಸಿದರು.ಮೂರು ದಿನ ನಡೆದ ಕೃಷಿ ಮೇಳಕ್ಕೆ ಒಟ್ಟು 6 ಲಕ್ಷ ಜನ ಭೇಟಿ ಕೊಟ್ಟು ಕೃಷಿ ಸಂಬಂಧಿತ ಮಾಹಿತಿ ಪಡೆದುಕೊಂಡಿದ್ದಾರೆ.
ಮೂರು ದಿನ ನಡೆದ ಕೃಷಿ ಮೇಳಕ್ಕೆ ಒಟ್ಟು 6 ಲಕ್ಷ ಜನ ಭೇಟಿ ಕೊಟ್ಟು ಕೃಷಿ ಸಂಬಂಧಿತ ಮಾಹಿತಿ ಪಡೆದುಕೊಂಡಿದ್ದಾರೆ.ಎಂ ಹನುಮಂತಪ್ಪ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ
ಅಭಿವೃದ್ಧಿಯ ಮಾಹಿತಿ ಪಡೆದುಕೊಂಡಿದ್ದಾರೆ.ಸುನೀಲ್ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.