ADVERTISEMENT

ರಾಜತಾಂತ್ರಿಕ ಮೌಲ್ಯ ಗಾಳಿಗೆ ತೂರಿದ ಸರ್ಕಾರ: ಎಐಡಿಎಸ್ಒ ವಿದ್ಯಾರ್ಥಿ ಸಮ್ಮೇಳನ

ಜಿಲ್ಲಾಮಟ್ಟದ ಎಐಡಿಎಸ್ಒ ವಿದ್ಯಾರ್ಥಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 14:28 IST
Last Updated 11 ಜನವರಿ 2022, 14:28 IST
ರಾಯಚೂರಿನ ಕರ್ನಾಟಕ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಆಲ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ 5ನೇ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷ ಹಯ್ಯಳಪ್ಪ ಮಾತನಾಡಿದರು
ರಾಯಚೂರಿನ ಕರ್ನಾಟಕ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಆಲ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ 5ನೇ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷ ಹಯ್ಯಳಪ್ಪ ಮಾತನಾಡಿದರು   

ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಲು ಮುಂದಾಗಿ ರಾಜತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೋರುತ್ತಿವೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾಧ್ಯಕ್ಷ ಖಾಲೀದ್ ಮೋಹಿನುದ್ದಿನ್ ಹೇಳಿದರು.

ನಗರದ ಕರ್ನಾಟಕ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಆಲ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯಿಂದ (ಎಐಡಿಎಸ್ಒ) 5ನೇ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ನೇತೃತ್ವದ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವುದು ಖಂಡನೀಯ. ಇದು ಶಿಕ್ಷಣ ವಿರೋಧಿ ನೀತಿಯಾಗಿದೆ. ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿ ಕೈಬಿಟ್ಟು ಶೈಕ್ಷಣಿಕ ಅಭಿವೃದ್ಧಿ ಮುಂದಾಗಬೇಕಾಗಿದೆ. ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಸುವುದು ಅವಶ್ಯವಾಗಿದೆ. ವಿದ್ಯಾರ್ಥಿ ಚಳವಳಿಯನ್ನು ಪ್ರಬಲಗೊಳಿಸಬೇಕು. ನೂತನ ವಿದ್ಯಾರ್ಥಿ ಸಂಘಟನೆ ಹೊಸ ಉತ್ಸಾಹ, ನಾಯಕತ್ವ, ಎನ್ಇಪಿ ಹಾಗೂ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಟ ಮುಂದುವರೆಸಬೇಕಿದೆ ಎಂದು ಹೇಳಿದರು.

ADVERTISEMENT

ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷ ಮಹೇಶ ಚಿಕಲಪರ್ವಿ ಹುತಾತ್ಮ ಸ್ತಂಭಕ್ಕೆ ನಮನ ಸಲ್ಲಿಸಿ ಸಂಘಟನಾತ್ಮಕ ಗೊತ್ತುವಳಿ, ಮುಖ್ಯ ಗೊತ್ತುವಳಿ ಪದಾಧಿಕಾರಿಗಳ ಒಪ್ಪಿಗೆಯೊಂದಿಗೆ ಮಂಡನೆ ಮಾಡಿದರು.

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಡಾ.ಚಂದ್ರ ಗಿರೀಶ ಮಾತನಾಡಿ, ವಿದ್ಯಾರ್ಥಿಗಳು ರಾಜಕೀಯವಾಗಿ ಸಾಂಸ್ಕೃತಿಕವಾಗಿ ಬಲಿಷ್ಠಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಎಐಡಿಎಸ್ಒ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಹಯ್ಯಳಪ್ಪ, ಕಾರ್ಯದರ್ಶಿಯಾಗಿ ಪೀರ್ ಸಾಬ್, ಉಪಾಧ್ಯಕ್ಷೆಯಾಗಿ ಅಪೂರ್ವ, ಕಛೇರಿ ಕಾರ್ಯದರ್ಶಿ ಭಾವನಾ, ಹೇಮಂತ್, ಮಂಡಳಿ ಸದಸ್ಯ ಬಸವರಾಜ, ಅಮೋಘ, ವಿರೇಶ, ಶ್ರೀಕಾಂತ್ ಎಕ್ಸಿಸಿಟಿವ್ ಹಾಗೂ ಕೌನ್ಸಿಲ್ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.