
ಲಿಂಗಸುಗೂರು: ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ 20,21ರಂದು 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಅಮರೇಶ ವೆಂಕಟಾಪುರ ಹೇಳಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ರಾಜ್ಯದಲ್ಲಿ 10 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗಿದೆ. 11ನೇ ಸಮ್ಮೇಳನ ರಾಯಚೂರಿನಲ್ಲಿ ನಡೆಸಲಾಗುತ್ತಿದೆ. ಯಾದಗಿರಿಯ ಹಿರಿಯ ಸಾಹಿತಿ ಜಯದೇವಿ ಗಾಯಕವಾಡ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಬಸವೇಶ್ವರ ವೃತ್ತದಿಂದ ರಂಗಮಂದಿರವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನವನ್ನು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಎಲ್.ಹನುಮಂತಯ್ಯ ಆಶಯ ನುಡಿಗಳನ್ನು ನುಡಿಯಲಿದ್ದಾರೆ. ಸಚಿವ ಎನ್.ಎಸ್.ಬೋಸರಾಜ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲೆಯ ಸಂಸದ, ಶಾಸಕರು, ರಾಜಕೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದಸಾಪ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ, ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಹೇಳಿದರು.
‘ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ಹಾಗೂ ಸಂವಾದ, ಸಂವಾದ ಗೋಷ್ಠಿ, ಸಮ್ಮೇಳನ ಅಧ್ಯಕ್ಷರ ಸಾಹಿತ್ಯ, ಮಹಿಳಾ ಕಾವ್ಯಯಾನ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ, ಸಂಕೀರ್ಣ ಗೋಷ್ಠಿಗಳು ನಡೆಯಲಿವೆ. ತಾಲ್ಲೂಕಿನ ಹಿರಿಯ ಹೋರಾಟಗಾರ ಭೀಮಣ್ಣ ಹಿರೇನಗನೂರು ಅವರಿಗೆ ದಲಿತ ಚೇತನ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಶಿಕ್ಷಕ ಶರಣಬಸವ ಗುಡದಿನ್ನಿ ಅವರ ಉಡದಾರ ಕೃತಿಗೆ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಹಾಗೂ ತಾಲ್ಲೂಕಿನ ಲಕ್ಷ್ಮಪ್ಪ, ಡಿ.ಎಚ್.ಕಡದಹಳ್ಳಿ, ರಂಗನಾಥ, ಜೀವನಕುಮಾರ, ಚಂದ್ರಶೇಖರ ವ್ಯಾಕರನಾಳ, ಮಲ್ಲಪ್ಪ ಸರ್ಜಾಪುರ, ಬುರ್‍ರಕಥಾ ಕಮಲಮ್ಮ ಅವರಿಗೆ ಸನ್ಮಾನ ಮಾಡಲಾಗುತ್ತಿದೆ. ಕವಿಗೋಷ್ಠಿಯಲ್ಲಿ ತಾಲ್ಲೂಕಿನ ಯುವ ಕವಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಹೇಳಿದರು.
ಮಹಾಂತಗೌಡ ಪಾಟೀಲ, ಶಿವರಾಜ ಕೆಂಭಾವಿ, ಭೀಮಾಶಂಕರ, ಪರಮಾನಂದ, ಸತೀಶ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.