
ರಾಯಚೂರು: ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಡಿಸೆಂಬರ್ 20ರಿಂದ ಎರಡು ದಿನಗಳ ವರೆಗೆ ನಡೆಯಲಿರುವ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಬಿಸಿಲೂರು ಸಜ್ಜಾಗಿದೆ.
ಮಹಾದ್ವಾರಕ್ಕೆ ಕವಿ ಬೋಳಬಂಡೆಪ್ಪ ಉರುಕುಂದಪ್ಪ ಪಂಡಿತ ತಾರಾನಾ ಹೆಸರಿಡಲಾಗಿದೆ. ವೇದಿಕೆಗೆ ಶರಣೆ ಆಯ್ದಕ್ಕೆಇ ಲಕ್ಕಮ್ಮ ಹಾಗೂ ಮಂಟಪಕ್ಕೆ ಕವಿ ಜಂಬಣ್ಣ ಅಮರಚಿಂತ ನಾಮಕರಣ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವವರಿಗೆ ಸ್ವಾಗತ ಕೋರಿ ರಂಗೋಲಿ ಹಾಕಲಾಗಿದೆ. ಸ್ವಾಗತಕೋರುವ ಕಮಾನು ನಿರ್ಮಿಸಿ, ಕೆಂಪು ನೆಲಹಾಸು ಹಾಕಲಾಗಿದೆ.
ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಾಹಿತಿ ಎಲ್.ಹನುಮಂತಯ್ಯ ಆಶಯ ಭಾಷಣ ಮಾಡಲಿದ್ದಾರೆ. ಸಾಹಿತಿ ಜಯದೇವಿ ಗಾಯಕವಾಡ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ನಿಕಟಪೂರ್ವ ಅಧ್ಯಕ್ಷ ಪ್ರೊ.ಎಚ್.ಟಿ.ಪೋತೆ ಪಾಲ್ಗೊಳ್ಳುವರು. ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೋಳಸಂಗಿ ಉಪಸ್ಥಿತರಿರುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಲಿಗಾರ ಪರಿಷತ್ತಿನ ಕೃತಿಗಳ ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಶಿವರಾಜ ಪಾಟೀಲ ಪುಸ್ತಕ ಮಳಿಗೆ ಉದ್ಘಾಟಿಸುವರು. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಸಂಸದ ಕುಮಾರ ಸರ್ವಾಧ್ಯಕ್ಷ ಪುಸ್ತಕ ಮಳಿಗೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಖಾದಗಿ ಹಾಗೂ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ, ಕರೆಮ್ಮ ನಾಯಕ, ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಶರಣಗೌಡ ಪಾಟೀಲ ಬಯ್ಯಾಪುರ, ಡಿಎಸ್‌ಎಸ್ ಸಂಚಾಲಕ ಆರ್.ಮೋಹನರಾಜ್ ಆಗಮಿಸಲಿದ್ದಾರೆ. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ‘ಸರ್ವರಿಗೂ ಸಂವಿಧಾನ’ ಕುರಿತು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ವಿಷಯ ಮಂಡಿಸುವರು. ಮಧ್ಯಾಹ್ನ 2.30ಕ್ಕೆ ‘ಮೀಸಲಾತಿ ಒಳಗೆ ಮತ್ತು ಹೊರಗೆ’ ಕುರಿತು ಸಾಹಿತಿ ಗುರುಪ್ರಸಾದ ಕಂಟಲಗೆರೆ ವಿಷಯ ಮಂಡಿಸಲಿದ್ದಾರೆ
ಸಂಜೆ 4 ಗಂಟೆಗೆ ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕುರಿತು ಬೇಲೂರಿನ ಉರಲಿಂಗ ಪೆದ್ದಿಮಠದ ಪಂಚಾಕ್ಷರಿ ಸ್ವಾಮೀಜಿ ನೇತೃತ್ವದಲ್ಲಿ ಗೋಷ್ಠಿ ನಡೆಯಲಿದೆ. ಸಂಜೆ 5.30ಕ್ಕೆ ಮಹಿಳಾ ಕಾವ್ಯಾಯಾನ–1 ಗೋಷ್ಠಿ ನಡೆಯಲಿದೆ. ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜಾನಪದ ಕಲಾ ತಂಡಗಳ ಮೆರವಣಿಗೆ
ಡಿ.20ರಂದು ಬೆಳಿಗ್ಗೆ 8 ಗಂಟೆಗೆ ಬಸವೇಶ್ವರ ವೃತ್ತದಿಂದ ಜಿಲ್ಲಾ ರಂಗ ಮಂದಿರದ ವರೆಗೆ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಮೇಯರ್ ನರಸಮ್ಮ ಮಾಡಗಿರಿ ಮೆರವಣಿಗೆ ಚಾಲನೆ ನೀಡುವರು. ಜಯಣ್ಣ, ಮಹಮ್ಮದ್ ಶಾಲಂ, ನರಸರೆಡ್ಡಿ, ಚಂದಪ್ಪ, ಬಸವರಾಜ ಗುರಿ, ಶರಣಪ್ಪ ವಡ್ಡನಕೇರಿ ಪಾಲ್ಗೊಳ್ಳುವರು.
ಇದಕ್ಕೂ ಮೊದಲು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಜಲ್ದಾರ್ ಧ್ವಾಜಾರೋಹಣ ನೆರವೇರಿಸುವರು. ತಹಶೀಲ್ದಾರ್ ಸುರೇಶ ವರ್ಮಾ, ಇಒ ಚಂದ್ರಶೇಖರ ರಾಠೋಡ, ಸಾಹಿತಿ ಬಸವರಾಜ ಐನೋಳ್ಳಿ, ತೆರಿಗೆ ಅಧಿಕಾರಿ ಅಂಬಾದಾಸ್ ಕಾಂಬಳೆ ಉಪಸ್ಥಿತರಿರುವರು.
ಡಿ.21 ರಂದು ಸಂಜೆ 4 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಸಮಾರೋಪ ಭಾಷಣ ಮಾಡುವರು. ಬೀದರ್‌ನ ಬೌದ್ಧ ವಿಹಾರದ ವರಜ್ಯೋತಿ ಭಂತೇಜಿ ನೇತೃತ್ವ ವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.