ಸಿಂಧನೂರು: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡುವುದರ ಮೂಲಕ ಕಾರ್ಮಿಕ ದಂಗೆಗಳಿಗೆ ಹೆಗಲೊಡ್ಡಲು ಮುಂದಾಗಬೇಕು’ ಎಂದು ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಪಿ.ಪಿ.ಅಪ್ಪಣ್ಣ ಕರೆ ನೀಡಿದರು.
ಸ್ಥಳೀಯ ಎಪಿಎಂಸಿ ರೈತ ಭವನದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜುಲೈ 9ರ ಅಖಿಲ ಭಾರತ ಮುಷ್ಕರವನ್ನು ಬೃಹತ್ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಮುಂದಾಗಬೇಕಾಗಿದೆ ಎಂದು ತಿಳಿಸಿದ ಅವರು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಾ ಆಳುವ ವರ್ಗಕ್ಕೆ ಸೇವೆ ಸಲ್ಲಿಸುತ್ತಿರುವ ಕೆಲ ಕಾರ್ಮಿಕ ಸಂಘಟನೆಗಳಿಂದ ಹೊರಬಂದು ರಾಜಿರಹಿತ ಕ್ರಾಂತಿಕಾರಿ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ‘ದುಡಿಯುವ ಜನರಿಗೆ ಮೂಲಭೂತ ಸೌಕರ್ಯಗಳಂತಹ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಮಿಕರನ್ನು ಸಂಘಟಿಸುವುದರ ಮೂಲಕ ಹೋರಾಟಕ್ಕೆ ಮುಂದಾಗಬೇಕಾಗಿದೆ’ ಎಂದು ತಿಳಿಸಿದರು.
ಎಐಸಿಸಿಟಿಯು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅಜೀಜ್ ಜಾಗೀರದಾರ, ಕಾರ್ಯದರ್ಶಿಯಾಗಿ ಬಸವರಾಜ ಎಕ್ಕಿ ಸೇರಿ 13 ಜನರನ್ನು ಸದಸ್ಯರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು.
ಮುಖಂಡರಾದ ಬಸವರಾಜ ಬೆಳಗುರ್ಕಿ, ಆರ್.ಎಚ್.ಕಲಮಂಗಿ, ಶ್ರೀನಿವಾಸ ಬುಕ್ಕನ್ನಟ್ಟಿ, ವೀರೇಶ ಲಿಂಗಸುಗೂರು, ಬಸವರಾಜ ದೇವದುರ್ಗ ಉಪಸ್ಥಿತರಿದ್ದರು. ಬಸವರಾಜ ಕೊಂಡೆ ನಿರೂಪಿಸಿದರು.
ಮೆರವಣಿಗೆ: ಸಮಾವೇಶ ಭಾಗವಾಗಿ ನಗರದ ಪ್ರವಾಸಿ ಮಂದಿರದಿಂದ ಕಾರ್ಮಿಕರು ಕೆಂಪಾವುಟ ಹಿಡಿದು ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಬಾಬುಜಗಜೀವನರಾಂ ವೃತ್ತದ ಮೂಲಕ ಎಪಿಎಂಸಿ ರೈತ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ಕ್ರಾಂತಿಗೀತೆ ಹಾಡಿ ಘೋಷಣೆ ಮೊಳಗಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.