ADVERTISEMENT

ಅಂಬಾದೇವಿ ರಥೋತ್ಸವ: ನಿಯಮ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 14:56 IST
Last Updated 17 ಜನವರಿ 2022, 14:56 IST
ಸಿಂಧನೂರು ತಾಲ್ಲೂಕಿನ ಅಂಬಾಮಠದಲ್ಲಿ ನಡೆದ ಅಂಬಾದೇವಿ ರಥೋತ್ಸವದಲ್ಲಿ ಭಕ್ತರು ಭಾಗವಹಿಸಿರುವುದು
ಸಿಂಧನೂರು ತಾಲ್ಲೂಕಿನ ಅಂಬಾಮಠದಲ್ಲಿ ನಡೆದ ಅಂಬಾದೇವಿ ರಥೋತ್ಸವದಲ್ಲಿ ಭಕ್ತರು ಭಾಗವಹಿಸಿರುವುದು   

ಸಿಂಧನೂರು: ತಾಲ್ಲೂಕಿನ ಅಂಬಾಮಠದ ಸಿದ್ಧಪರ್ವತವಾಸಿ ಅಂಬಾದೇವಿ ಜಾತ್ರೋತ್ಸವವು ಸೋಮವಾರ ಬೆಳಗಿನ ಜಾವ ಸಾಕಷ್ಟು ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ಜರುಗಿತು.

ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು, ಅಂಬಾಮಠ ಜಾತ್ರೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಆದರೂ ಸೋಮವಾರ ಬೆಳಗಿನ ಜಾವ ಸಾಂಕೇತಿಕವಾಗಿ ಶ್ರೀದೇವಿಯ ಮೂರ್ತಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ, ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ದೇವಸ್ಥಾನದ ಅರ್ಚಕರು ಅಂಬಾದೇವಿ ಉತ್ಸವ ಮೂರ್ತಿಯೊಂದಿಗೆ ಬಂದು ರಥದ ಕಳಸಕ್ಕೆ ಪೂಜೆ ಸಲ್ಲಿಸಿದರು.

ADVERTISEMENT

ನಂತರ ರಥೋತ್ಸವಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಚಾಲನೆ ನೀಡಿದರು.

ಉತ್ಸವ ಮೂರ್ತಿಯನ್ನು ಹೊತ್ತಿದ್ದ ರಥೋತ್ಸವ ಪಾದಕಟ್ಟೆಯವರೆಗೆ ಸಾಗಿತು. ಭಕ್ತರು ಜಯಘೋಷ ಹಾಕಿ, ಉತ್ತತ್ತಿ, ಬಾಳೆಹಣ್ಣು ರಥೋತ್ಸವಕ್ಕೆ ಎಸೆದು ಭಕ್ತಿ ಅರ್ಪಿಸಿದರು.

ಪ್ರತಿವರ್ಷ ಸಂಜೆ ವೇಳೆಯಲ್ಲಿ ರಥೋತ್ಸವ ನಡೆಯುತ್ತಿತ್ತು. ಕೋವಿಡ್ ಕಾರಣದಿಂದ ಕಳೆದ ವರ್ಷ ಮತ್ತು ಈ ಬಾರಿ ಬೆಳಗಿನ ಜಾವ ರಥೋತ್ಸವ ನಡೆದದ್ದು ವಿಶೇಷವಾಗಿತ್ತು.

ಅಂಕಲಿಮಠದ ಫಕೀರಯ್ಯ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಅಂಬಾಮಠದ ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಜಶೇಖರ ಹಿರೇಮಠ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ನಿಯಮ ಉಲ್ಲಂಘನೆ:ರಥೋತ್ಸವದಲ್ಲಿ ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು. ಬೆಳಗಿನ ಜಾವ ನಡೆದ ರಥೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಯಾರೂ ಕೋವಿಡ್‌ ನಿಯಮ ಪಾಲಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.