ಸಿಂಧನೂರು: ‘ದೇಶದ 18 ಶಕ್ತಿ ಪೀಠಗಳಲ್ಲಿ ಒಂದಾಗಿರುವ ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನವನ್ನು ಯಾತ್ರಾ ಸ್ಥಳವನ್ನಾಗಿ ಪರಿವರ್ತಿಸಿ ಅಗತ್ಯ ಮೂಲಸೌಕರ್ಯ ಒದಗಿಸಲು ₹150 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಈ ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದಲ್ಲಿ ಶನಿವಾರ ಶಿಲಾಮಂಟಪ ನಿರ್ಮಾಣಕ್ಕಾಗಿ ತಂದಿದ್ದ ಕೆತ್ತನೆಯಾದ ಶಿಲೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಮುದಾಯ ಭವನದಲ್ಲಿ ನಡೆದ ಅಧಿಕಾರಿಗಳ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಶಿಲಾಮಂಟಪದ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ₹15 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಇದರಲ್ಲಿ ಮೊದಲ ಹಂತವಾಗಿ ₹6.30 ಕೋಟಿ ಹಣಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿ ಮಂಜೂರು ಮಾಡಿದೆ’ ಎಂದರು.
‘ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದ್ದ ₹2.75 ಕೋಟಿ ಹಣವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮುದ್ದನಾಯಕನಹಳ್ಳಿಯಲ್ಲಿ ಶಿಲೆಗಳ ಕೆತ್ತನೆ ಹಾಗೂ ಶಿಲ್ಪಿಗಳ ನೇಮಕ ಮಾಡಲಾಗಿದೆ. ಈಗಾಗಲೇ ಶಿಲಾ ಮಂಟಪದ ಕಟ್ಟೆ ಮತ್ತು ಬುನಾದಿ ಕೆಲಸ ಪ್ರಗತಿಯಲ್ಲಿದೆ’ ಎಂದು ವಿವರಿಸಿದರು.
‘ಮುಂಬರುವ ಜಾತ್ರೆಯೊಳಗೆ ಗರ್ಭಗುಡಿ, ಸುಖಾಸೀನ ಗೋಡೆ, ಶಿಲಾಮಂಟಪ ಕಾಮಗಾರಿ ಪೂರ್ಣಗೊಳಿಸಬೇಕು. ಎರಡನೇ ಹಂತದಲ್ಲಿ ₹6.30 ಕೋಟಿ ಹಣ ಬಿಡುಗಡೆಯಾಗಲಿದ್ದು, ಐದು ಗೋಪುರಗಳ ನಿರ್ಮಾಣ ಕೆಲಸ ಆರಂಭಿಸಲಾಗುವುದು. ಇದಕ್ಕೆ ಈಗಾಗಲೇ ನೀಲನಕ್ಷೆ ತಯಾರಿಸಲಾಗಿದೆ’ ಎಂದು ಹೇಳಿದರು.
‘ಅಂಬಾಮಠದಲ್ಲಿ 50 ಹಾಸಿಗೆಯ ಆಸ್ಪತ್ರೆ, ಪೊಲೀಸ್ ಠಾಣೆ, ಅಗ್ನಿಶಾಮಕ ಉಪ ಠಾಣೆ, 5 ಸಾವಿರ ಭಕ್ತರು ಒಂದೇ ಬಾರಿಗೆ ಊಟ ಮಾಡುವ ಬೃಹತ್ ಕೋಣೆ, ವಸತಿ ಗೃಹಗಳ ಕಟ್ಟಡ, ಹೈಟೆಕ್ ಶೌಚಾಲಯ, ಸ್ನಾನಗೃಹಗಳು, ಬಯಲು ರಂಗಮಂದಿರ, ಕುಡಿಯುವ ನೀರಿನ ಟ್ಯಾಂಕ್, ವಿದ್ಯುತ್ ದೀಪ, ಬ್ಯಾಗ್ರೌಂಡ್ ಸೌಂಡ್ ಆಂಡ್ ಲೈಟಿಂಗ್, ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನದಂದು ಭಕ್ತರಿಗೆ ಊಟದ ವ್ಯವಸ್ಥೆ ಸೇರಿ 28 ಮೂಲಸೌಕರ್ಯಗಳನ್ನು ಒದಗಿಸಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡಬೇಕೆಂಬ ಬೇಡಿಕೆಗಳು ಕ್ರಿಯಾಯೋಜನೆಯಲ್ಲಿವೆ’ ಎಂದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ,‘ದೇವಸ್ಥಾನದ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ವ್ಯಾಪಕ ಪ್ರಚಾರ ಮಾಡಿದರೆ ಭಕ್ತರು ನೀಡುವ ದೇಣಿಗೆಯಿಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ಮತ್ತಷ್ಟು ಅನುಕೂಲವಾಗಲಿದೆ’ ಎಂದು ಹೇಳಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ,‘ಅಂಬಾಮಠ ಶಕ್ತಿಮಠದ ಬಗಳಾಮುಖಿಯ ಶಕ್ತಿಯನ್ನು ದೇಶವಷ್ಟೇ ಅಲ್ಲ, ವಿದೇಶಗಳಿಗೂ ಪರಿಚಯಿಸುವ ಕೆಲಸ ಆಗಬೇಕಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿ,‘ಅಂಬಾದೇವಿ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ಬೇಕಾಗುವ ₹80 ಲಕ್ಷವನ್ನು ತಮ್ಮ ಅನುದಾನದಲ್ಲಿ ನೀಡಲಾಗುವುದು’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ ಮಾತನಾಡಿದರು.
ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ್, ಪ್ರಭಾರ ಪೌರಾಯುಕ್ತೆ ಶೃತಿ ಕೆ, ಸರ್ಕಲ್ ಇನ್‌ಸ್ಪೆಕ್ಟರ್ ವೀರಾರೆಡ್ಡಿ, ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಕಾರ್ಯದರ್ಶಿ ಹನುಮೇಶ ಆಚಾರ್, ನಗರಸಭೆ ಸದಸ್ಯೆಯರಾದ ಲಕ್ಷ್ಮಿ ತಿಮ್ಮಯ್ಯ ಭಂಗಿ, ನಳಿನಿ ಚಂದ್ರಶೇಖರ ಮೇಟಿ, ಕ್ಯಾಸೋಟೆಕ್ ಟೆಕ್ನಿಕಲ್ ನೋಡಲ್ ಅಧಿಕಾರಿ ಶರಣಬಸವ ಉಪಸ್ಥಿತರಿದ್ದರು. ಬಸವರಾಜ ಹಿರೇಗೌಡರ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.