ಮಾನ್ವಿ: ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ಬಳಿ ₹397.50 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದ್ದ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮುಖಂಡರು ಹಾಗೂ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿರುವ ಕಾರಣ ಕಾಮಗಾರಿಗೆ ಆರಂಭದಲ್ಲಿಯೇ ವಿಘ್ನ ಉಂಟಾಗಿದೆ.
ಚೀಕಲಪರ್ವಿ ಬಳಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣದ ಬೇಡಿಕೆ ದಶಕಗಳಿಂದ ಇದೆ. ಈ ಸೇತುವೆ ನಿರ್ಮಾಣಗೊಂಡರೆ ಆಂಧ್ರ ಪ್ರದೇಶದ ಸಂಪರ್ಕದಿಂದ ಈ ಭಾಗದ ವ್ಯಾಪಾರ ವಹಿವಾಟು ವೃದ್ಧಿ ಹಾಗೂ ಪ್ರವಾಸೋದ್ಯಮದ ಬೆಳವಣಿಗೆಗೆ ಅನುಕೂಲ ಎಂಬುದು ಸ್ಥಳೀಯರ ಅಭಿಪ್ರಾಯ.
ಕಾರಣ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಸ್ಥಳೀಯ ಶಾಸಕ ಜಿ.ಹಂಪಯ್ಯ ನಾಯಕ ಹೆಚ್ಚಿನ ಆಸಕ್ತಿ ವಹಿಸಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಈ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಆಡಳಿತಾತ್ಮಕ ಹಾಗೂ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣದ ಜತೆಗೆ ಬ್ಯಾರೇಜ್ ನಿರ್ಮಾಣ ಮಾಡಿದರೆ, ನದಿಪಾತ್ರದಲ್ಲಿರುವ ಮಾನ್ವಿ, ಸಿಂಧನೂರು ಹಾಗೂ ಸಿರಗುಪ್ಪ ತಾಲ್ಲೂಕುಗಳ ಸುಮಾರು ಇಪ್ಪತ್ತು ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿ ಹಾಗೂ ನೀರಾವರಿ ಸೌಲಭ್ಯ ಪಡೆಯುವ ಉದ್ದೇಶ ಹೊಂದಲಾಗಿತ್ತು.
ಸಣ್ಣ ನೀರಾವರಿ ಇಲಾಖೆಯ ವತಿಯಿಂದ ₹397.50 ಕೋಟಿ ಅನುದಾನದಲ್ಲಿ ಬೃಂದಾವನ ಕನಸ್ಟಕ್ಷನ್ಸ್ ಕಂಪನಿ ಕಾಮಗಾರಿಯ ಗುತ್ತಿಗೆಯ ವರ್ಕ್ ಆರ್ಡರ್ ಪಡೆದು ಎರಡು ತಿಂಗಳ ಹಿಂದೆ ಕೆಲಸ ಆರಂಭಕ್ಕೆ ಮುಂದಾಗಿತ್ತು. ಆದರೆ ಈ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ವಿರೋಧಿಸಿ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮುಖಂಡ ತಿಕ್ಕಾರೆಡ್ಡಿ ಮತ್ತಿತರರು ಬಹಿರಂಗ ಹೇಳಿಕೆ ನೀಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸುವಂತೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯುದ್ದಕ್ಕೂ ಕರ್ನಾಟಕ ಸರ್ಕಾರ ಏತ ನೀರಾವರಿ ಯೋಜನೆ, ಅಣೆಕಟ್ಟು ಹಾಗೂ ಜಲಾಶಯಗಳನ್ನು ನಿರ್ಮಿಸಿದರೆ ಆಂಧ್ರಪ್ರದೇಶಕ್ಕೆ ಸೇರಿದ ತುಂಗಭದ್ರಾ ನದಿಯ ಕೆಳಭಾಗದ ವ್ಯಾಪ್ತಿಯಲ್ಲಿ ಕೃಷಿಗೆ ಹಾಗೂ ಕುಡಿಯಲು ನೀರಿನ ಅಭಾವ ಉಂಟಾಗಲಿದೆ ಎಂಬುದು ಅಲ್ಲಿನ ಮುಖಂಡರ ತಕರಾರು ಎಂದು ತಿಳಿದುಬಂದಿದೆ.
ಚೀಕಲಪರ್ವಿ ಬಳಿ ಬ್ಯಾರೇಜ್ ಹೊರತುಪಡಿಸಿ ಸಂಪರ್ಕ ಕಲ್ಪಿಸಲು ಕೇವಲ ಸೇತುವೆ ನಿರ್ಮಾಣಕ್ಕೆ ಮಾತ್ರ ಆಂಧ್ರಪ್ರದೇಶದ ಮುಖಂಡರ ಒಪ್ಪಿಗೆ ಇದೆ ಎನ್ನಲಾಗಿದೆ.
ಆಂಧ್ರಪ್ರದೇಶ ಸರ್ಕಾರದ ಅನುಮತಿ ಇಲ್ಲದೆ ಗಡಿ ಭಾಗದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ಧೋರಣೆ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಕಾಮಗಾರಿ ಸ್ಥಗಿತ:
ಬೃಂದಾವನ ಕನಸ್ಟಕ್ಷನ್ಸ್ ಕಂಪನಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕಾಗಿ ಚೀಕಲಪರ್ವಿ ಗ್ರಾಮದ ಬಳಿ ಕಾಂಕ್ರೀಟ್ ಮಿಶ್ರಣ ಮಾಡುವ ಆರ್‌ಎಂಸಿ ಘಟಕ, ಕಾರ್ಮಿಕರು ಹಾಗೂ ಸಿಬ್ಬಂದಿಗಾಗಿ ತಾತ್ಕಾಲಿಕ ವಸತಿ ಗೃಹಗಳ ಕ್ಯಾಂಪ್ ಸ್ಥಾಪಿಸಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆಸಿತ್ತು. ಕಳೆದ ತಿಂಗಳು ಕಾಮಗಾರಿ ಸ್ಥಗಿತಕ್ಕೆ ಸೂಚನೆ ಬಂದ ನಂತರ ಅಲ್ಲಿನ ಸಲಕರಣೆಗಳನ್ನು ಬೈಲ್ ಮರ್ಚೇಡ್ ಗ್ರಾಮದ ಬಳಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಂಪನಿಯ ಆರ್‌ಎಂಸಿ ಘಟಕದ ಸಿಬ್ಬಂದಿ ತಿಳಿಸಿದರು.
ಕಾಮಗಾರಿ ವಿಳಂಬ ಸಾಧ್ಯತೆ:
ಕಾಮಗಾರಿಗೆ ಅನುಮತಿಗಾಗಿ ಆಂಧ್ರಪ್ರದೇಶದ ಸರ್ಕಾರಕ್ಕೆ ನಮ್ಮ ರಾಜ್ಯ ಸರ್ಕಾರದಿಂದ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಹೇಳಲಾಗಿದ್ದರೂ ಇನ್ನೂ ಸಮ್ಮತಿ ಸಿಕ್ಕಿಲ್ಲ. ಮೇ ತಿಂಗಳ ಅಂತ್ಯ ಅಥವಾ ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಕಾಮಗಾರಿ ನಿರ್ವಹಣೆ ಕಷ್ಟ ಸಾಧ್ಯ. ಮತ್ತೆ ಮುಂದಿನ ವರ್ಷ ಬೇಸಿಗೆಯಲ್ಲಿ ಕಾಮಗಾರಿ ಆರಂಭಿಸಬೇಕಾದ ಪರಿಸ್ಥಿತಿ ಉದ್ಭವಿಸುವ ಸಂಭವ ಇದೆ. ಹೀಗಾಗಿ ಈ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದು ತಜ್ಞರ ಅಭಿಪ್ರಾಯ.
ಚೀಕಲಪರ್ವಿ ಬಳಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕುರಿತು ನಮ್ಮ ಸರ್ಕಾರದಿಂದ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆಂಧ್ರಪ್ರದೇಶ ಸರ್ಕಾರದ ಸಮ್ಮತಿ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು.ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
ನದಿಪಾತ್ರದ ಗ್ರಾಮಗಳ ಹಿತದೃಷ್ಟಿಯಿಂದ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಅಗತ್ಯ. ನಮ್ಮ ಭಾಗದಲ್ಲಿ ವ್ಯಾಪಾರ ವಹಿವಾಟು ವೃದ್ಧಿಸುವ ದೃಷ್ಟಿಯಿಂದ ಚೀಕಲಪರ್ವಿ ಬಳಿ ಕೇವಲ ಸೇತುವೆ ನಿರ್ಮಾಣಕ್ಕಾದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.ಜೆ.ಸುಧಾಕರ, ಅಧ್ಯಕ್ಷ, ಬಿಜೆಪಿ ಮಂಡಲ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.