ಲಿಂಗಸುಗೂರು: ತಾಲ್ಲೂಕಿನ ಸರ್ಜಾಪುರ-ಕುಪ್ಪಿಗುಡ್ಡ ಗ್ರಾಮಗಳ ಮಧ್ಯೆ ಇರುವ ಸಿದ್ಧಿವೀರಾಂಜನೇಯ ಮೂರ್ತಿಯನ್ನು ಗುರುವಾರ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.
ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿರುವ ಚೆನ್ನಬಸವಸ್ವಾಮಿ ವಿಭೂತಿಮಠ ಆಶ್ರಮದ ಆವರಣದಲ್ಲಿದ್ದ ಸಿದ್ಧವೀರಾಂಜನೇಯ ಕಲ್ಲಿನ ಮೂರ್ತಿಯನ್ನು ದುಷ್ಕರ್ಮಿಗಳು ತುಂಡು ತುಂಡು ಮಾಡಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ವಿಭೂತಿಮಠದ ಆಶ್ರಮದಲ್ಲಿದ್ದ ಕಳಸ ಹಾಗೂ ಇತರೆ ಪೂಜಾ ಸಾಮಾಗ್ರಿಗಳು ಇತ್ತೀಚಿಗೆ ಕಳ್ಳತನವಾಗಿವೆ ಎನ್ನಲಾಗಿದೆ. ಕಳ್ಳತನ ಪ್ರಕರಣ ಮಾಸುವ ಮುನ್ನವೇ ಮೂರ್ತಿ ಧ್ವಂಸಗೊಳಿಸಿದ್ದು ಭಕ್ತರ ಭಾವನೆಗೆ ದಕ್ಕೆ ತಂದಿದೆ ಎಂದು ಗ್ರಾಮದ ಮುಖಂಡ ಹನುಮಂತರಾಯ ನೆಲೋಗಿ ನೀಡಿದ ದೂರಿನ್ವಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಜೆಯಾದರೆ ಸಾಕು ಆಶ್ರಮದಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತದೆ. ಕೆಲವು ವರ್ಷಗಳ ಹಿಂದೆ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್‌ಗಳನ್ನು ಕಳ್ಳತನ ಮಾಡಲಾಗಿತ್ತು. ಹೀಗಾಗಿ ಪೊಲೀಸ್ ಇಲಾಖೆ ರಾತ್ರಿ ವೇಳೆ ಗಸ್ತು ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್, ಹಟ್ಟಿ ಪಿಐ ಹೊಸಕೇರಪ್ಪ ,ಪಿಎಸ್ಐ ಮಾದಪ್ಪ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.