ರಾಯಚೂರು: ಜಿಲ್ಲೆಯಲ್ಲಿ ವಿವಿಧೆಡೆ ಗೋವಿನ ಜೋಳ ಬೆಳೆಯಲ್ಲಿ ಫಾಲ್ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ರೈತರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಜಯಪ್ರಕಾಶ ಸಲಹೆ ನೀಡಿದ್ದಾರೆ.
ಮರಿ ಹುಳುಗಳು ಎಲೆಗಳ ಮೇಲ್ಮೈಯನ್ನು ತಿಂದರೆ, ಡೊಡ್ಡ ಹುಳುಗಳು ಕೇಂದ್ರ ಸುಳಿಯನ್ನು ತಿನ್ನುತ್ತವೆ. ಇದು ವ್ಯಾಪಕವಾದ ಎಲೆಗೊಂಚಲು ಉಂಟು ಮಾಡುತ್ತದೆ. ಇವು ಸುಳಿ ಮತ್ತು ತೆನೆಗಳನ್ನು ತಿಂದು ಹಾಕುತ್ತವೆ.
ನಿಯಂತ್ರಣಕ್ಕೆ ಪೀಡೆ ಸಮೀಕ್ಷೆ ನಡೆಸಿ ಕೀಟದ ಹರಡುವಿಕೆ ಮೇಲೆ ನಿಗಾವಹಿಸಬೇಕು. ಕೀಟದ ಮೊಟ್ಟೆಯ ಗುಂಪು ಮತ್ತು ಮರಿ ಹುಳುಗಳನ್ನು ಕೈಯಿಂದ ಆರಿಸಿ ನಾಶಪಡಿಸಬೇಕು. ಕೀಟದ ಬಾಧೆ ಕಡಿಮೆ ಇದ್ದಾಗ ಮರಿ ಹುಳುಗಳ ನಿಯಂತ್ರಣಕ್ಕೆ ಬೇವಿನ ಮೂಲದ ಕೀಟನಾಶಕ ಅಜಾಡಿರಕ್ಟಿನ್ 1500 ಪಿಪಿಎಮ್ 2 ಮಿಲಿ ಲೀಟರ್ ಅಥವಾ ಜೈವಿಕ ಶಿಲೀಂಧ್ರ ಕೀಟ ನಾಶಕ ಮೆಟಾರೈಜಿಯಮ್ ರಿಲೇ 2 ಗ್ರಾಂ ಅಥವಾ ಮೆಟಾರೈಜಿಯಮ್ ಅನಿಸೊಪ್ಪಿ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕೀಟದ ತೀವ್ರತೆ ಜಾಸ್ತಿ ಆದಾಗ ಹುಳುವನ್ನು ಹತೋಟಿಯಲ್ಲಿಡಲು ಲ್ಯಾಮ್ಡಸಹಲೋಥ್ರಿನ್ 1 ಎಂ.ಎಲ್ ಅಥವಾ ಇಮಾಮೆಕ್ಟಿನ್ ಬೆಂಜೋಯಿಟ್ ಶೇ 5ರಷ್ಟು ಎಸ್.ಜಿ. 0.4 ಗ್ರಾಂ ಅಥವಾ ಕ್ಲೊರಾಂತ್ರಿನಿಲಿಪ್ರೆಲ್ 18.5 ಎಸ್.ಸಿ. 0.3 ಮಿಲಿ ಲೀಟರ್ ಅಥವಾ ಸೈನೋಸ್ಯಾಡ್ 45 ಎಸ್.ಸಿ 0.3 ಎಂ.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗೆ ಸಮೀಪ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಜಂಟಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.