
ರಾಯಚೂರು: ‘ಸಿರಿಧಾನ್ಯ ಬಳಕೆ ಮತ್ತು ಉತ್ಪಾದನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಸಿರಿಧಾನ್ಯ ಜಾಗೃತಿ ನಡಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಆವರಣದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ವರೆಗೆ ನಡೆಯಿತು
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚೌಹಾಣ ಮಾತನಾಡಿ,‘ಸಮತೋಲನ ಮತ್ತು ಪೌಷ್ಟಿಕ ಆಹಾರ ಹೆಚ್ಚಿನ ಮಹತ್ವ ಪಡೆದಿದೆ. ಬದಲಾದ ಆಹಾರ ಪದ್ದತಿಯಿಂದ ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ. ಅನಾರೋಗ್ಯದ ಸಮಸ್ಯೆಗಳಿಗೆ ಕಲುಷಿತ ಆಹಾರವೇ ಕಾರಣವಾಗಿದೆ. ಹೀಗಾಗಿ ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ’ ಎಂದರು.
‘ಸಿರಿಧಾನ್ಯಗಳು ರಾಸಾಯನಿಕ ಮುಕ್ತ, ನಾರಿನ ಅಂಶಗಳಿಂದ ಕೂಡಿದ ಸಮೃದ್ದದ್ಧ ಆಹಾರವಾಗಿದೆ. ಗ್ರಾಹಕರು ಸಿರಿಧಾನ್ಯಗಳು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗೂ ಉತ್ತಮ ದರ ದೊರೆಯುವಲ್ಲಿ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಮಾತನಾಡಿ, ‘ಸಿರಿಧಾನ್ಯಗಳಿಗೆ ಜಾಗತಿಕ ಮನ್ನಣೆ ದೊರೆಯುತ್ತಿದೆ. ಸಿರಿಧಾನ್ಯಗಳ ಉತ್ಪಾದನೆ ಮತ್ತು ಸೇವನೆ ಜಿಲ್ಲೆಯಲ್ಲಿ ಹೆಚ್ಚಾಗಬೇಕೆಂಬ ಉದ್ದೇಶದಿಂದ ಜಾಥಾ ಆಯೋಜಿಸಲಾಗಿದೆ’ ಎಂದರು.
ಬೆಳಿಗ್ಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಿದರು. ಸಿರಿಧಾನ್ಯಗಳ ಮಹತ್ವವನ್ನು ಸಾರುವ ವಿವಿಧ ಭಿತ್ತಿಪತ್ರ ಬಿಡುಗಡೆ ಮತ್ತು ಘೋಷಣೆಯ ಮೂಲಕ ಜಾಥಾ ಆರಂಭವಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೊ, ಸಹಾಯಕ ಕೃಷಿ ನಿರ್ದೇಶಕ ನಯೀಮ ಹುಸೇನ್, ಮುತ್ತುರಾಜ ಮತ್ತು ರಾಯಚೂರು ಕೃಷಿ ಇಲಾಖೆಯ ಕೃಷಿ ನಿರ್ದೇಶಕಿ ದೀಪಾ ಎಲ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತಿಮ್ಮಣ ನಾಯಕ, ಅರುಣಕುಮಾರ ಹೊಸಮನಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಾ ಶಾವಂತಗೇರಾ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಕೃಷಿ ಇಲಾಖೆ, ಬಸವೇಶ್ವರ ವೃತ್ತ ಮಾರ್ಗವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ವರೆಗೆ ಬಂದು ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.