ADVERTISEMENT

ಸಿಂಧನೂರು | ಮಗು ಅದಲು-ಬದಲು ಆರೋಪ: ಪಾಲಕರ ಆಕ್ರೋಶ

ನರ್ಸ್‌ಗಳ ಗೊಂದಲದಿಂದಾಗಿ ತಪ್ಪು ನಡೆದಿದೆ: ವೈದ್ಯ ಡಾ.ನಾಗರಾಜ ಕಾಟ್ವಾ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 7:24 IST
Last Updated 6 ಜುಲೈ 2025, 7:24 IST
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ   

ಸಿಂಧನೂರು: ‘ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನನ್ನ ಪತ್ನಿ ರೇವತಿಗೆ ಹೆರಿಗೆಯಾಗಿ ಗಂಡು ಮಗು ಜನಿಸಿದೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಬದಲಾಯಿಸಿದ್ದಾರೆ’ ಎಂದು ಹೆರಿಗೆಯಾದ ಮಹಿಳೆಯ ಪತಿ ಹುಲ್ಲಪ್ಪ ಮುದಗಲ್, ಅತ್ತೆ ನೀಲಮ್ಮ ಮತ್ತು ಅವರ ಸಂಬಂಧಿಕರು ಆರೋಪಿಸಿದ್ದಾರೆ.

ತಾಲ್ಲೂಕಿನ ಗಾಂಧಿನಗರ ಗ್ರಾಮದ ರೇವತಿಗೆ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಆಸ್ಪತ್ರೆ ಸಿಬ್ಬಂದಿ ಗಂಡು ಮಗುವನ್ನು ಕೊಟ್ಟು ತಾಯಿಯ ಎದೆ ಹಾಲುಣಿಸಿದ್ದಾರೆ. ನಂತರ ‘ನಮ್ಮಿಂದ ತಪ್ಪಾಗಿದೆ ನಿಮಗೆ ಹುಟ್ಟಿರುವುದು ಹೆಣ್ಣು ಮಗು. ಈ ಗಂಡು ಮಗು ನಿಮ್ಮದಲ್ಲ’ ಎಂದು ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.

‘ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೈಚಳಕದಿಂದ ಮಕ್ಕಳ ಬದಲಾವಣೆ ನಡೆಯುತ್ತಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗುವುದು. ಜನಿಸಿದ ಗಂಡು ಮಗು ನಮ್ಮದೆ. ಬೇಕಿದ್ದರೆ ಡಿಎನ್‍ಎ ಪರೀಕ್ಷೆ ಮಾಡಿಕೊಳ್ಳಲಿ’ ಎಂದು ರೇವತಿಯ ಸಂಬಂಧಿಕರು ತಿಳಿಸಿದರು.

ADVERTISEMENT

ಈ ಕುರಿತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ನಾಗರಾಜ ಕಾಟ್ವಾ ಅವರನ್ನು ಸಂಪರ್ಕಿಸಿದಾಗ,‘ಸೀಸರಿಯನ್ ಮಾಡಿದ್ದು ನಾನೇ. ಅವರಿಗೆ ಹುಟ್ಟಿರುವುದು ಹೆಣ್ಣು ಮಗು. ನರ್ಸ್‍ಗಳ ಗೊಂದಲದಿಂದಾಗಿ ಸ್ವಲ್ಪ ಏರುಪೇರಾಗಿ ಹೆಣ್ಣು ಮಗು ಕೊಡುವ ಬದಲು ಗಂಡು ಮಗು ಕೊಟ್ಟಿದ್ದಾರೆ. ಇದು ಅವರಿಗೆ ಅನುಮಾನ ಮೂಡಲು ಕಾರಣವಾಗಿದೆ. ಅವರು ಬೇಕಾದರೆ ತಮ್ಮ ಇಚ್ಛೆ ಅನುಸಾರವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬಹುದು’ ಎಂದು ಪ್ರತಿಕ್ರಿಯಿಸಿದರು.

ಹೆರಿಗೆ ಸಂದರ್ಭದಲ್ಲಿ ಮಕ್ಕಳ ವೈದ್ಯೆ ಡಾ.ಫರಹತ್ ತಬಸೂಮ್ ಬೇಗಂ, ನರ್ಸ್‍ಗಳಾದ ಮಮತಾ, ಸುಮಿತ್ರಾ, ತೇಜಸ್ವಿನಿ, ರೇಷ್ಮಾ ಇದ್ದರೆಂದು ತಿಳಿದು ಬಂದಿದೆ.

ಡಾ.ನಾಗರಾಜ ಕಾಟ್ವಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.