ಕವಿತಾಳ: ಸತತ ಮಳೆಯಿಂದ ಸಮೀಪದ ಬಾಗಲವಾಡ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.
ರಸ್ತೆ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು ಮತ್ತು ಜಲ ಜೀವನ ಮಿಷನ್ ಯೋಜನೆಯಡಿ ಪೈಪ್ ಅಳವಡಿಸಲು ತಗ್ಗು ತೆಗೆದು ಹಾಗೆಯೇ ಬಿಟ್ಟಿರುವುದು ಹೀಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಮಾನ್ವಿ– ಕವಿತಾಳ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು ಬಸ್, ಶಾಲಾ ವಾಹನ, ಭಾರಿ ಗಾತ್ರದ ಲಾರಿಗಳು ಸೇರಿದಂತೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಆಳವಾದ ತಗ್ಗುಗಳು ಬಿದ್ದು ಅವುಗಳಲ್ಲಿ ಮಳೆ ನೀರು ನಿಂತ ಪರಿಣಾಮ ಬೈಕ್ ಸವಾರರು ಆಯ ತಪ್ಪಿ ಬೀಳುತ್ತಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಜಾರಿ ಬಿದ್ದ ಉದಾಹರಣೆಗಳಿವೆ ಎಂದು ಗ್ರಾಮಸ್ಥರು ಆರೋಪಿಸಿದರು.
‘ಈಚೆಗೆ ಕೆಸರಲ್ಲಿ ಸಿಕ್ಕಿಕೊಂಡ ಲಾರಿಯನ್ನು ಜೆಸಿಬಿ ಯಂತ್ರದ ಸಹಾಯದಿಂದ ಹೊರಗೆ ತೆಗೆಯಲಾಯಿತು. ಬೈಕ್ ಸವಾರರು ತಗ್ಗಿಗೆ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಮಳೆ ಬಂದರೆ ಮುಖ್ಯರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕಾಮಗಾರಿ ಚುರುಕುಗೊಳಿಸುತ್ತಿಲ್ಲ’ ಎಂದು ಗ್ರಾಮದ ಅಮರೇಶ, ಹುಸೇನಪ್ಪ ನಾಯಕ, ಜಗದೀಶ, ಮೌನೇಶ ಕೋರಿ, ಗಂಗಾಧರ, ಮೌಲಾಲಿ, ನಾಗರಾಜ ಭೋವಿ, ಹುಸೇನಪ್ಪ ಕಟ್ಟಿ ಒತ್ತಾಯಿಸಿದರು.
ಜೆಜೆಎಂ ಯೋಜನೆಯಡಿ ಪೈಪ್ ಅಳವಡಿಸಲು ತಗ್ಗು ತೆಗೆದು ಕೆಲವು ಕಡೆ ಹಾಗೆಯೇ ಬಿಡಲಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದೆ. ಮಳೆ ನೀರು ನಿಂತು ಸಮಸ್ಯೆ ಉಂಟಾಗಿದೆಅಮರೇಶ ಬಾಗಲವಾಡ ಸ್ಥಳೀಯ
ಸತತ ಮಳೆಯಿಂದ ಕಾಮಗಾರಿ ಸ್ಥಗಿತವಾಗಿತ್ತು. ನೀರು ಹೋಗಲು ಜಾಗವಿಲ್ಲದ ಕಾರಣ ಸಮಸ್ಯೆಯಾಗಿದೆ. ತಾತ್ಕಾಲಿಕ ದುರಸ್ತಿ ಕೈಗೊಂಡಿದ್ದು ರಸ್ತೆ ದುರಸ್ತಿ ಕಾಮಗಾರಿ ಶೀಘ್ರ ಆರಂಭಿಸಲಾಗುವುದುಸ್ಯಾಮೂವೆಲ್ ಪ್ರಭಾರ ಎಇಇ ಲೊಕೋಪಯೋಗಿ ಇಲಾಖೆ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.