ADVERTISEMENT

ಜಿಲ್ಲೆಯಲ್ಲಿ ಸಂಭ್ರಮದೊಂದಿಗೆ ಬಕ್ರೀದ್‌ ಆಚರಣೆ

ಮನೆ ಹಾಗೂ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 13:05 IST
Last Updated 21 ಜುಲೈ 2021, 13:05 IST
ರಾಯಚೂರಿನ ಸರಾಫ್‌ ಬಜಾರ್‌ನಲ್ಲಿರುವ ಮಸೀದಿಯಲ್ಲಿ ಬಕ್ರೀದ್‌ ಹಬ್ಬದ ದಿನದಂದು ಬುಧವಾರ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು
ರಾಯಚೂರಿನ ಸರಾಫ್‌ ಬಜಾರ್‌ನಲ್ಲಿರುವ ಮಸೀದಿಯಲ್ಲಿ ಬಕ್ರೀದ್‌ ಹಬ್ಬದ ದಿನದಂದು ಬುಧವಾರ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು   

ರಾಯಚೂರು: ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಸರಳವಾಗಿ ಹಾಗೂ ಸಂಭ್ರಮದಿಂದ ಬುಧವಾರ ಆಚರಿಸಿದರು.

ಕೋವಿಡ್‌ ನಿಯಮಪಾಲನೆ ಜಾರಿಯಲ್ಲಿ ಇರುವುದರಿಂದ ಈ ವರ್ಷವೂ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ಇರಲಿಲ್ಲ. ಅನುಕೂಲಕ್ಕೆ ಅನುಸಾರವಾಗಿ ಮಸೀದಿಗಳಲ್ಲಿ ಹಾಗೂ ತಮ್ಮ ಮನೆಗಳಲ್ಲಿಯೇ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೆಳಗಿನ ಜಾವದಿಂದಲೇ ಅನೇಕರು ಮಸೀದಿಗಳತ್ತ ಪ್ರಾರ್ಥನೆಗಾಗಿ ಹೋಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜನದಟ್ಟಣೆಗೆ ಅವಕಾಶ ಆಗದಂತೆ, ನಿರ್ದಿಷ್ಟ ಸಂಖ್ಯೆಯಲ್ಲಿಯೇ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿದರು. ಸದ್ಯಕ್ಕೆ ಜಿಲ್ಲೆಯಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗಿರುವುದರಿಂದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಹೀಗಾಗಿ, ವಿಶೇಷ ಪ್ರಾರ್ಥನೆಯ ಬಳಿಕ ಆಪ್ತ ಸ್ನೇಹಿತರನ್ನು ಆಲಂಗಿಸಿ ಪರಸ್ಪರ ‘ಈದ್‌ ಮುಬಾರಕ್‌’ ಹೇಳುತ್ತಿರುವುದು ಕಂಡುಬಂತು.

ADVERTISEMENT

ಬಹುತೇಕರು ಶುಭ್ರ ಶ್ವೇತ ವಸ್ತ್ರ ಧರಿಸಿದ್ದರು. ಭಕ್ತಿಭಾವದಲ್ಲಿ ಮುಳುಗಿದ್ದ ಮುಸ್ಲಿಮರೆಲ್ಲರೂ ಲೋಕಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು. ಹಿರಿಯರೊಂದಿಗೆ ಮಕ್ಕಳು ಕೂಡಾ ಹೊಸ ಉಡುಗೆ ತೊಟ್ಟು ಕಂಗೊಳಿಸಿದರು. ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಪರಸ್ಪರ ಆಲಂಗಿಸುವುದು, ಕೈಕುಲುಕಿ ಶುಭಾಶಯ ಹೇಳುತ್ತಿರುವುದು ಮಸೀದಿಗಳ ಎದುರು ಬೆಳಿಗ್ಗೆ ಸಾಮಾನ್ಯವಾಗಿತ್ತು. ಮೊದಲಿನಂತೆ ಸಾಮೂಹಿಕವಾಗಿ ಶುಭಾಶಯ ಕೋರುವುದು, ಸಂಭ್ರಮದೊಂದಿಗೆ ಸಂಭಾಷಿಸುವ ಚಿತ್ರಣ ಇರಲಿಲ್ಲ.

ಬಕ್ರೀದ್‌ ಹಬ್ಬ ಆಚರಣೆಯ ಹಿಂದಿರುವ ನಂಬಿಕೆಯ ಪ್ರಕಾರ, ಬುಧವಾರ ಬೆಳಗಿನ ಜಾವದಲ್ಲಿಯೇ ಕೆಲವರು ಕುರಿಗಳನ್ನು ಬಲಿ ಕೊಟ್ಟರು. ಮಾಂಸಾಹಾರದ ವಿವಿಧ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯ ಪಾಲನೆ ಮಾಡಿದರು. ಆಪ್ತರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಸಿಹಿ ಭೋಜನ, ಕುರಿ ಮಾಂಸದೂಟ ಸವಿಯುವುದು ಸಾಮಾನ್ಯವಾಗಿತ್ತು.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕುರಿ, ಮೇಕೆಗಳು ದುಬಾರಿಯಾಗಿವೆ. ಸಾಧಾರಣ ಒಂದು ವರ್ಷದ ಕುರಿಗೆ ₹10 ರಿಂದ ₹14 ಸಾವಿರ ದರವಿದೆ. ಎಲ್ಲರೂ ಕುರಿ ಖರೀದಿಸಲು ಸಾಧ್ಯವಾಗುವುದಿಲ್ಲ. ಹಬ್ಬ ಆಚರಿಸುವುದಕ್ಕಾಗಿ, ಸಾಧ್ಯವಾದಷ್ಟು ಮಟನ್‌ ಖರೀದಿಸಿ ಸವಿಯುತ್ತಾರೆ. ಕೆಲವರು ಬಡವರಿಗೆ ದಾನ ಕೂಡಾ ಮಾಡುತ್ತಾರೆ’ ಎಂದು ನಿಜಲಿಂಗಪ್ಪ ಕಾಲೋನಿಯ ಹನೀಫ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.