
ರಾಯಚೂರು: ‘ದೇಶದಲ್ಲಿ ಇಂದು ಸಾಮಾಜಿಕ ಶ್ರೇಣಿಕರಣ, ಆರ್ಥಿಕ ಕೇಂದ್ರೀಕರಣ ಹಾಗೂ ಧಾರ್ಮಿಕ ಧ್ರುವೀಕರಣ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಶೋಷಿತ ಸಮುದಾಯಗಳು ಬಿಕ್ಕಟ್ಟಿನ ವಾತಾವರಣದಲ್ಲಿ ಹಾದು ಹೋಗಬೇಕಾದ ಸ್ಥಿತಿಯಿದೆ’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಶನಿವಾರ ಇಲ್ಲಿಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಆರಂಭವಾದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಾಮಾಜಿಕ ಶ್ರೇಣಿಕರಣ ಮೊದಲಿನಿಂದಲೂ ಇದೆ. ಅದರ ಸ್ತರಗಳು ಬದಲಾಗಿವೆ. ಶ್ರೇಣಿಕರಣ ವರ್ಣಗಳ ವಿಭಜನೆ ಹಂತದಲ್ಲಿ ನಿಂತಿಲ್ಲ. ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಎಂಬ ನಾಲ್ಕು ವರ್ಣಗಳಿಗೆ ನಿಂತಿಲ್ಲ. ಜಾತಿಯೊಳಗೂ ಶ್ರೇಣಿಕರಣ ನೋಡುತ್ತಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ರಾಜ್ಯಗಳ ಸಂಪನ್ಮೂಲ ಕ್ರೋಡೀಕರಿಸಿ ಕೇಂದ್ರಕ್ಕೆ ಕೊಟ್ಟು ಬೇಡಿಕೊಳ್ಳುವುದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆಯಲು ಸಾಧ್ಯವಿಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ವಿರೋಧಿಸಲಿಲ್ಲ. ಇವತ್ತು ದುಡ್ಡು ಬರಲಿಲ್ಲ ಹೇಳುತ್ತಿದ್ದಾರೆ. ಸೈದ್ಧಾಂತಿಕವಾಗಿ ಇರುವವರು ಯಾವ ಪಕ್ಷದಲ್ಲಿದ್ದರೂ ವಿರೋಧ ಮಾಡುತ್ತಾರೆ. ಹಿಂದೆ ಎಡಪಂಥಿಯರು ಮಾತ್ರ ವಿರೋಧ ಮಾಡಿದ್ದರು’ ಎಂದು ಹೇಳಿದರು.
‘ಇಂದು ಆರ್ಥಿಕ ಕೇಂದ್ರೀಕರಣ ಪ್ರಬಲವಾಗಿದೆ. ಶೇ 60ರಷ್ಟು ಸಂಪತ್ತನ್ನು ಶೇ 1ರಷ್ಟು ಜನ ಅನುಭೋಗಿಸುತ್ತಿದ್ದಾರೆ. ಧಾರ್ಮಿಕ ಧ್ರುವೀಕರಣವು ಧರ್ಮ ದ್ವೇಷದ ದ್ವೀಪವನ್ನು ನಿರ್ಮಾಣ ಮಾಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ದೇಶದಲ್ಲಿ 18 ನಿಮಿಷಕ್ಕೆ ಒಬ್ಬ ರೈತ, ಪ್ರತಿವಾರ 13 ಜನ ದಲಿತರ ಹತ್ಯೆಯಾಗುತ್ತಿದೆ. ದಿನಕ್ಕೆ 10 ದಲಿತ ಮಹಿಳೆಯರ ಅತ್ಯಾಚಾರವಾಗುತ್ತಿದೆ. ಮನುಷ್ಯತ್ವ ಇಲ್ಲದಿದ್ದರೆ ಆರ್ಥಿಕತೆ ಕಟ್ಟಿಕೊಂಡು ಏನು ಆಗಬೇಕು. ಸಂವಿಧಾನದ ಬಗ್ಗೆ ಗೌರವ ಇರುವುದಾದರೆ ಧಾರ್ಮಿಕ ಮೂಲಭೂತವಾದಿಗಳನ್ನು ವಿರೋಧಿಸಬೇಕು. ಧರ್ಮ, ಜಾತಿ ದ್ವೇಷ ವಿರೋಧಿಸಬೇಕು’ ಎಂದು ಹೇಳಿದರು.
ಸ್ವಚ್ಛ ಭಾರತ ಒಳ್ಳೆಯ ಪರಿಕಲ್ಪನೆ. ಆದರೆ ಅದರ ಗುರುತಿನಲ್ಲಿ ಗಾಂಧಿ ಕನ್ನಡಕ ಮಾತ್ರ ಇದೆ. ಗಾಂಧಿಯೇ ಇಲ್ಲ. ಬೀದಿ ಭಾರತ ಸ್ವಚ್ಛವಾದರೆ ಸಾಲದು, ಆಂತರಿಕ ಭಾರತ ಸ್ವಚ್ಛವಾಗಬೇಕು’ ಎಂದು ನುಡಿದರು.
‘ದೇಶದಲ್ಲಿ ಒಂದೇ ಗಂಟೆಯಲ್ಲಿ 51 ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಶೇ 29.9ರಷ್ಟು ಜನರಿಗೆ ಸ್ವಂತ ಜಮೀನಿಲ್ಲ. ಶೇ 51ರಷ್ಟು ಜನ ಕೂಲಿಕಾರರು ಇದ್ದಾರೆ. ಕೇಂದ್ರ ಸರ್ಕಾರದ ಸಂಸ್ಥೆಯೇ ವರದಿ ಕೊಟ್ಟಿದೆ’ ಎಂದರು.
‘ಸಾಮಾಜಿಕ ಶ್ರೇಣೀಕರಣದ ಕಂದಕ ಜಾಸ್ತಿಯಾಗಿದೆ. ಈ ಕಂದಕವನ್ನು ಕಡಿಮೆ ಮಾಡಬೇಕಿದೆ. ಬದಕುವ ಸಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ಇಂದು ದಲಿತರು, ದಲಿತೇತರರು ಹಾಗೂ ಪ್ರಗತಿಪರರು ಒಗ್ಗೂಡಿದರೆ ಮಾತ್ರ ಜಟಿಲ ಸಮಸ್ಯೆಗಳಿಗೆ ಸರಿಯಾದ ಉತ್ತರ ಕೊಡಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.
‘20ನೇ ಶತಮಾನದಲ್ಲಿ ಸಂಘಟನೆ ಹಾಗೂ ಒಗ್ಗಟ್ಟು ಇತ್ತು. 21ನೇ ಶತಮಾನ ವಿಘಟನೆಗಳ ಶತಮಾನವಾಗಿದೆ. ಸಂಘಟನೆಗಳು ಒಡೆದು ಹೋಗುತ್ತಿವೆ. ಹಿಂದೆ ಕೈಗಾರೀಕರಣ ಸಾಮೂಹಿಕ ಪ್ರಜ್ಞೆಯನ್ನು ಕೊಟ್ಟಿತ್ತು. ಸಮುದಾಯ ಪ್ರಜ್ಞೆ ಮುಖ್ಯವಾಗಿತ್ತು. ಜಾಗತೀಕರಣದ ನಂತರದಲ್ಲಿ ವ್ಯಕ್ತಿ ಕೇಂದ್ರಿತವಾ ಸಾಮಾಜಿಕ ಮನೋಧರ್ಮವನ್ನು ಕೊಟ್ಟಿದೆ. ಈಗ ವ್ಯಕ್ತಿ ಪ್ರಜ್ಞೆ ಮುಖ್ಯವಾಗಿದೆ. 20ನೇ ಶತಮಾನದಲ್ಲಿ ಸಮೂಹ ಸಂವೇದನೆ ಮುಖ್ಯವಾಗಿತ್ತು. 21ನೇ ಶತಮಾನದಲ್ಲಿ ಸಮೂಹ ಸನ್ನಿಧಿ ಮುಖ್ಯವಾಗಿದೆ’ ಎಂದು ಹೇಳಿದರು.
‘ಮುಂಚೆ ಕೈಗಾರಿಕೆಯ ಸಾಮೂಹಿಕ ಉತ್ಪಾದನೆಗೆ ಮಹತ್ವಕೊಡಲಾಗಿತ್ತು. ಜಾಗತೀಕರಣದ ನಂತರ ಸ್ವಾರ್ಥ ಹಾಗೂ ವ್ಯಕ್ತಿ ಕೇಂದ್ರದ ಉತ್ಪಾದನೆ ಜಾಸ್ತಿಯಾಗಿದೆ. ಸಮಾಜ ಸುಧಾರಣೆಯ ಪರಿಕಲ್ಪನೆಯ ಜಾಗವನ್ನು ಆರ್ಥಿಕ ಸುಧಾರಣೆ ಅಕ್ರಮಿಸಿಕೊಂಡಿದೆ. ಇದು ಬಂಡವಾಳ ಶಾಹಿಗಳ ಪರವಾದ ಆರ್ಥಿಕ ಸುಧಾರಣೆಯಾಗಿದೆ. ಭಾರತವನ್ನು 3ನೇ ಆರ್ಥಿಕ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ. ಆದರೆ, ರೂಪಾಯಿ ಮೌಲ್ಯ ಡಾಲರ್‌ಗೆ 90ರವರೆಗೂ ಕುಸಿದಿದೆ’ ಎಂದು ತಿಳಿಸಿದರು.
‘ಸಮಾಜದಲ್ಲಿ ಮತೀಯತೆ, ಧಾರ್ಮಿಕ ಸಂಘರ್ಷ ಬಂದಿದೆ. ಜಾತಿ ವಿನಾಶ ಆಗಬೇಕಿತ್ತು. ಜಾತಿ ವಿಕಾಸ ಆಗುತ್ತಿದೆ. ಶಿಕ್ಷಣ ಪಡೆದವರೇ ಹೆಚ್ಚು ಜಾತೀಯತೆ ಮಾಡುತ್ತಿದ್ದಾರೆ. ಹೀಗಾಗಿ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ಆಶಯಗಳ ಬಗ್ಗೆ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ ಪರಿಷತ್ತಿನ ಕೃತಿಗಳ ಬಿಡುಗಡೆ ಮಾಡಿದರು. ಶಾಸಕ ಶಿವರಾಜ ಪಾಟೀಲ ಪುಸ್ತಕ ಮಳಿಗೆ ಉದ್ಘಾಟಿಸಿದರು. ಸಂಸದ ಕುಮಾರ ನಾಯಕ ಅವರು ಅಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟಿಸಿದರು.
ಸಾಹಿತಿ ಎಲ್.ಹನುಮಂತಯ್ಯ ಆಶಯ ಭಾಷಣ ಮಾಡಿದರು. ರಾಯಚೂರು ಮೇಯರ್ ನರಸಮ್ಮ ಮಾಡಗಿರಿ, ನಿಕಟಪೂರ್ವ ಅಧ್ಯಕ್ಷ ಪ್ರೊ.ಎಚ್.ಟಿ.ಪೋತೆ, ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೋಳಸಂಗಿ ಉಪಸ್ಥಿತರಿದ್ದರು.
ವೈ.ಎಂ.ಭಜಂತ್ರಿ ಸ್ವಾಗತಿಸಿದರು. ಸಿದ್ಧಾರ್ಥ ಚಿಮ್ಮ ಇದ್ಲಾಯಿ ನಾಡಗೀತೆ ಹಾಡಿದರು. ಎಚ್.ಬಿ. ಕೋಲ್ಕಾರ ಸಂವಿಧಾನ ಪ್ರಸ್ತಾವನೆ ಓದಿ, ಪ್ರತಿಜ್ಞಾವಿಧಿ ಬೋಧಿಸಿದರು. ಮೂರ್ತಿ ಬಿ. ಹಾಗೂ ಕಾವೇರಿ ಬೋಲಾ ನಿರೂಪಿಸಿದರು. ದಸಾಪ ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ ಮರ್ಚಟ್ಹಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.