ADVERTISEMENT

ಬಿಜೆಪಿಯರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ-ಬಸವರಾಜ ರಾಯರೆಡ್ಡಿ

ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 15:32 IST
Last Updated 4 ಏಪ್ರಿಲ್ 2021, 15:32 IST
ಬಸವರಾಜ ರಾಯರೆಡ್ಡಿ
ಬಸವರಾಜ ರಾಯರೆಡ್ಡಿ   

ರಾಯಚೂರು: ’ದೇಶವನ್ನು ಕಾಂಗ್ರೆಸ್ ಮುಕ್ತ ಗೊಳಿಸುತ್ತೇವೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ’ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಅನೈತಿಕ ಮನುಷ್ಯ. ಬಿಜೆಪಿಯ ಆಮೀಷಕ್ಕೆ ಒಳಗಾಗಿ ತನ್ನನ್ನು ತಾನು ಮಾರಿಕೊಂಡಿದ್ದಾರೆ. ವಿಚಾರವಂತರು ಇದನ್ನು ಅರ್ಥಮಾಡಿಕೊಂಡು ಚುನಾವಣೆಯಲ್ಲಿ ಅವರನ್ನು ಸೋಲಿಸಬೇಕು’ ಎಂದು ‌ಹೇಳಿದರು.

‘ಬಿಜೆಪಿಯವರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿಸಿ ವಾಮಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿದ್ದಾರೆ. ಪ್ರತಾಪಗೌಡ ಪಾಟೀಲರು ಸೇರಿ ಬಿಜೆಪಿಯ ಆಮೀಷಕ್ಕೆ ಒಳಗಾದ ನಾಯಕರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಇವರು ನಾಯಕರು ಎಂದು ಹೇಳಿಕೊಳ್ಳಲು ನೈತಿಕ ಹಕ್ಕಿಲ್ಲ‘ ಎಂದು ಟೀಕಿಸಿದರು.

ADVERTISEMENT

‘ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಮಾಡಲು ಬಿಡಲಾರೆನು ಎನ್ನುತ್ತಾರೆ. ಆದರೆ, ಬಿ.ಎಸ್.ಯಡಿಯೂರಪ್ಪ ಅನೈತಿಕವಾಗಿ ಸರ್ಕಾರ ಮಾಡಿದರೂ ಪ್ರಶ್ನೆ ಮಾಡಲ್ಲ. ಇದು ನಾಚಿಕೆಗೇಡಿನ ಸಂಗತಿ’ ಎಂದರು.

‘ಪ್ರತಾಪಗೌಡ ಪಾಟೀಲ ಅವರು ಸೋಲಿನ ಭಯದಿಂದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಅವರನ್ನು ಪ್ರಚಾರಕ್ಕೆ ಕರೆಸಿದ್ದಾರೆ. ವಿಜಯೇಂದ್ರ ಚುನಾವಣೆಯಲ್ಲಿ ಗೆಲ್ಲಲು ಹಣದ ಹೊಳೆ ಹರಿಸುತ್ತಿದ್ದಾರೆ. ಜಾತಿ ಹಾಗೂ ಹಣದ ಮೇಲೆ ಚುನಾವಣೆ ನಡೆಸಲು ಅವಕಾಶ ನೀಡಬಾರದು’ ಎಂದು ಹೇಳಿದರು.

‘ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 36 ಜನ ಕಾಂಗ್ರೆಸ್‌ಗೆ ಮತ ಹಾಕಿದರೆ ಶೇ 34 ರಷ್ಟು ಜನ ಬಿಜೆ‍ಪಿಗೆ ಮತ ಹಾಕಿದ್ದಾರೆ. ಆದರೆ, ಸೀಟುಗಳ ಗೆಲ್ಲುವಲ್ಲಿ ಬಿಜೆಪಿ ಮುಂದಿತ್ತು. ಕಾಂಗ್ರೆಸ್ ಮುಕ್ತ ಹೇಗೆ ಸಾಧ್ಯ. ಬಹುಮತ ಪಡೆಯದಿದ್ದರೂ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದಾರೆ’ ಎಂದು ದೂರಿದರು.

’ಬಿಜೆಪಿಯಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಭಾಗಕ್ಕೆ ಅವರ ಕೊಡುಗೆ ಶೂನ್ಯ. ಕಾಂಗ್ರೆಸ್ ಸರ್ಕಾರದಲ್ಲಿ ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯ ಘೋಷಣೆ ಮಾಡಿದ್ದು, ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ₹ 50 ಕೋಟಿ ಅನುದಾನ ನೀಡದೇ ಕಡೆಗಣಿಸಿದೆ. ಈ ಭಾಗದ ಕಾಳಜಿಯಿಲ್ಲ. ಮಂತ್ರಿ ಸ್ಥಾನವೂ ನೀಡಿಲ್ಲ’ ಎಂದು ಹೇಳಿದರು.

’ಯಡಿಯೂರಪ್ಪ ಸೇರಿ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಅನುಭವದ ಕೊರತೆ ಇದೆ. ಭ್ರಷ್ಟ ಹಾಗೂ ಲೂಟಿ ಸರ್ಕಾರವಾಗಿದೆ. ಆಡಳಿತ ನಿರ್ವಹಣೆಗೆ ಅಯೋಗ್ಯರು‘ ಎಂದು ಅವರು ಆರೋಪಿಸಿದರು.

‘ಇತಿಹಾಸದಲ್ಲಿಯೇ ಮೊದಲ ಬಾರಿಗೆ ಯಡಿಯೂರಪ್ಪ ಅವರ ಸರ್ಕಾರ ಅಭಿವೃದ್ಧಿಗೆ ಸಾಲ ಮಾಡಿದೆ. ಕಾಂಗ್ರೆಸ್‍ಗೆ ಕಳೆದ ವರ್ಷ ₹ 50 ಸಾವಿರ ಕೋಟಿ ಸಾಲ ಮಾಡಿದರೆ. ಯಡಿಯೂರಪ್ಪನವರು ಎರಡೇ ಬಜೆಟ್‌ನಲ್ಲಿ ₹ 71 ಸಾವಿರ ಕೋಟಿ ಸೇರಿ, ₹ 121 ಸಾವಿರ ಕೋಟಿ ಸಾಲ ಪಡೆದಿದ್ದು, ₹ 20 ಸಾವಿರ ಕೋಟಿ ಬಡ್ಡಿ ಪಾವತಿಸಬೇಕಿದೆ. ಬಿಜೆಪಿ ಸಾಲ ಮಾಡಿ ಸರ್ಕಾರ ನಡೆಸುತ್ತಿದೆ‘ ಎಂದು ಹೇಳಿದರು.

‘ಸಾಲ ಜಾಸ್ತಿಯಾಗಿ, ಆದಾಯ ಕೊರತೆಯ ಬಜೆಟ್ ಆಗಿದೆ. ಕೊರೊನಾ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದ್ದು ಹೀಗೆ ಬಿಟ್ಟರೆ ಎರಡು ವರ್ಷ ಅವಧಿಯಲ್ಲಿ ರಾಜ್ಯವನ್ನು ಹಾಳು ಮಾಡುತ್ತಾರೆ’ ಎಂದು ಆರೋಪಿಸಿದರು.

ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು, ಮುಖಂಡ ಪಾರಸಮಲ್ ಸುಖಾಣಿ, ಕೆ. ಶಾಂತಪ್ಪ, ನಗರಸಭೆ ಸದಸ್ಯ ಜಯಣ್ಣ, ಜಿ. ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ಅಬ್ದುಲ್ ಕರೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.