ADVERTISEMENT

‘ಯಶಸ್ವಿ ಉದ್ಯಮಿಯಾಗಿ, ಇತರರಿಗೂ ಉದ್ಯೋಗ ನೀಡಿ’

ಉದ್ಯಮಶೀಲತಾ ತರಬೇತಿಯ ಸಮರೋಪದಲ್ಲಿ ಕುಲಪತಿ ಎಂ.ಹನುಮಂತಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 16:09 IST
Last Updated 11 ಫೆಬ್ರುವರಿ 2025, 16:09 IST
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಐದು ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕುಲಪತಿ ಎಂ.ಹನುಮಂತಪ್ಪ ಅವರು ತರಬೇತಿ ಪಡೆದ ಮಹಿಳೆಗೆ ಪ್ರಮಾಣ ಪತ್ರ ವಿತರಿಸಿದರು
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಐದು ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕುಲಪತಿ ಎಂ.ಹನುಮಂತಪ್ಪ ಅವರು ತರಬೇತಿ ಪಡೆದ ಮಹಿಳೆಗೆ ಪ್ರಮಾಣ ಪತ್ರ ವಿತರಿಸಿದರು    

ಪ್ರಜಾವಾಣಿ ವಾರ್ತೆ

ರಾಯಚೂರು: ‘ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಪುರುಷರಂತೆ ಮುಕ್ತವಾಗಿ ಬದುಕುವ ಹಕ್ಕು ಇದೆ. ಮಹಿಳೆಯರಿಗಾಗಿ ಇರುವ ಉದ್ಯಮಶೀಲತಾ ತರಬೇತಿಯ ಸದುಪಯೋಗ ಪಡೆದು, ಯಶಸ್ವಿ ಉದ್ಯಮಿಯಾಗಿ ಇನ್ನುಳಿದವರಿಗೂ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ ಹೇಳಿದರು.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸ್ವ-ಸಹಾಯ ಸಂಘದ ಸದಸ್ಯರಿಗೆ ಸಂಕಲ್ಪ ಯೋಜನೆಯಡಿ ಆಯೋಜಿಸಿದ್ದ ಐದು ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ADVERTISEMENT

‘ಕೃಷಿ ಮತ್ತು ಕೃಷಿಯೇತರ ಅವಲಂಬಿತ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭಿಸಬೇಕು. ಸ್ವಂತ ಬ್ರಾಂಡ್ ಹೊಂದಬೇಕು’ ಎಂದು ಸಲಹೆ ನೀಡಿದರು.

ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ ಮಾತನಾಡಿ, ‘ಸಮುದಾಯ ಮತ್ತು ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸ್ವ-ಉದ್ಯೋಗವನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

‘ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಮಹಿಳೆಯ ಮೇಲಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮುಕ್ತವಾಗಿ ಸಾಧನೆ ಮಾಡುವ ಅವಕಾಶ ಇದೆ. ಮಹಿಳೆಯರು ಸಂಕೋಚವಿಲ್ಲದೆ ದುಡಿಯುವಂತಾಗಬೇಕು’ ಎಂದು ತಿಳಿಸಿದರು.

ಕೃಷಿ ವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಮುಖ್ಯಸ್ಥ ಡಾ.ಬಸವಣ್ಣಪ್ಪ, ಸಂಪನ್ಮೂಲ ವ್ಯಕ್ತಿ ಗೌರಮ್ಮ, ಡೇ-ನಲ್ಮ್ ವ್ಯವಸ್ಥಾಪಕ ರಸೂಲ್ ಸಾಬ್, ಸಿಡಾಕ್ ನಾಗರಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.