ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಬಿಆರ್‌ಐಡಿಸಿ ಕೇಂದ್ರಗಳ ಪ್ರತಿನಿಧಿಗಳ ಮತ್ತು ಎನ್‌ಜಿಒ ಪ್ರತಿನಿಧಿಗಳ ಸಭೆಯನ್ನು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಇ. ಸುಧೀಂದ್ರ ಉದ್ಘಾಟಿಸಿದರು.
ರಾಯಚೂರು: ಜೈವಿಕ ಇಂಧನವು ನಮ್ಮೆಲ್ಲರ ಭವಿಷ್ಯದ ಇಂಧನವಾಗಿದೆ. ಸೀಮೆ ಎಣ್ಣೆ ಮಾದರಿಯಲ್ಲಿ ಜೈವಿಕ ಡೀಸೆಲ್ಅನ್ನು ಮನೆಮನೆಗೆ ತಲುಪಿಸಲು ಪ್ರಯತ್ನ ಮಾಡಲಾಗುವುದು’ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಇ. ಸುಧೀಂದ್ರ ಹೇಳಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್‌ಬಿಡಿಬಿ), ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸಾಯನ್ಸ್ ಅಂಡ್ ಟೆಕ್ನಾಲಜಿ (ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಬಿಆರ್‌ಐಡಿಸಿ ಕೇಂದ್ರಗಳ ಪ್ರತಿನಿಧಿಗಳ ಮತ್ತು ಎನ್‌ಜಿಒ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
‘ಕಾಲ ಬದಲಾದಂತೆ ನಾವು ಕೂಡ ಬದಲಾಗಬೇಕಿದೆ. ಜನರಿಗೆ ಅಗತ್ಯ ಇರುವುದನ್ನು ಪೂರೈಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ನವ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ದೂರದೃಷ್ಟಿಯಾಗಿದೆ‘ ಎಂದು ತಿಳಿಸಿದರು.
‘ಜೈವಿಕ ಇಂಧನ ಉತ್ಪಾದನೆಗೆ ಸಂಬಂಧಿಸಿದಂತೆ ಈಗಿರುವ ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿ, ಕಾನೂನು ಸಚಿವ ಎಚ್.ಕೆ.ಪಾಟೀಲ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಚರ್ಚಿಸಲಾಗಿದೆ. ಅವರು ಹೊಸ ಜೈವಿಕ ಇಂಧನ ನೀತಿ ರೂಪಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಭರವಸೆ ಕೊಟ್ಟಿದ್ಧಾರೆ‘ ಎಂದು ಹೇಳಿದರು.
‘ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರೂಪಿಸುವ ಯಾವುದೇ ರೀತಿಯ ಯೋಜನೆಗಳಿಗೆ ಬಿಆರ್‌ಐಡಿಸಿ ಮತ್ತು ಎನ್‌ಜಿಒ ಹಾಗೂ ಇನ್ನೀತರರ ಸಹಕಾರ ಅಗತ್ಯವಾಗಿದೆ. ಜೈವಿಕ ಇಂಧನವನ್ನು ವಾಹನಗಳಿಗೆ ಸಹ ಬಳಸಬಹುದಾಗಿದೆ’ ಎಂದರು.
‘ಜೈವಿಕ ಇಂಧನಕ್ಕೆ ಹೆಚ್ಚಿನ ಬೇಡಿಕೆ ಬರಲಿದ್ದು, ಇದಕ್ಕೆ ಬೇಕಾದ ಕಚ್ಚಾ ಸಾಮಗ್ರಿಯ ಉತ್ಪಾದನೆಯ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕಿದೆ. ಜೈವಿಕ ಇಂಧನ ತಯಾರಿಕೆಗೆ ಸಹಕಾರಿಯಾಗುವ ಹೊಂಗೆ, ಸುರಹೊನ್ನ ಮತ್ತು ಬೇವು ಬೆಳೆ ಬೆಳೆಯಲು ರೈತರಿಗೆ ಪ್ರೋತಾಹ ನೀಡಬೇಕಿದೆ’ ಎಂದು ತಿಳಿಸಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ ಮಾತನಾಡಿದರು. ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಎಲ್. ಪ್ರಾಸ್ತಾವಿಕ ಮಾತನಾಡಿದರು.
ಸಂಶೋಧನಾ ನಿರ್ದೇಶಕ ಅಮರೇಗೌಡ, ಕಾರ್ಯನಿರ್ವಾಹಕ ಎಂಜಿನಿಯರ್ ದಿವಾಕರರಾವ್, ಡಾ.ಲೋಹಿತ್ ಬಿ.ಆರ್., ಜಯರಾಮ್, ಜೈವಿಕ ಇಂಧನ ಉದ್ಯಾನವನದ ಸಂಯೋಜಕ ಡಾ ಶ್ಯಾಮರಾವ ಕುಲಕರ್ಣಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬಸವರಾಜ ಹಾಗೂ ಬಿಆರ್‌ಐಡಿಸಿ ಕೇಂದ್ರದ 32 ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ಎನ್‌ಜಿಓ ಪ್ರತಿನಿಧಿಗಳು ಇ ಉಪಸ್ಥಿತರಿದ್ದರು. ಕೃಷಿ ವಿವಿಯ ಮುಖ್ಯ ವಿಜ್ಞಾನಿ ಮುನಿಸ್ವಾಮಿ ಎಸ್ ಸ್ವಾಗತಿಸಿದರು. ಅಮರೇಶ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.