ADVERTISEMENT

ರಾಯಚೂರು| ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಷದ ತೀರ್ಮಾನ: ಕುಮಾರ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:32 IST
Last Updated 11 ಜನವರಿ 2026, 6:32 IST
ಕುಮಾರ ಬಂಗಾರಪ್ಪ
ಕುಮಾರ ಬಂಗಾರಪ್ಪ   

ರಾಯಚೂರು: ‘ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆಗೆ ಪಕ್ಷದ ವರಿಷ್ಠರ ಮುಂದೆ ಅಭಿಪ್ರಾಯ ತಿಳಿಸಲಾಗಿದೆ. ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡುವ ಭರವಸೆಯಿದೆ. ಏನೇ ಆದರೂ ಪಕ್ಷದ ವರಿಷ್ಠರ ನಿರ್ಧಾರ ಗೌರವಿಸಬೇಕಾಗುತ್ತದೆ’ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದರು.

‘ರಾಜ್ಯಾಧ್ಯಕ್ಷರ ಬದಲಾವಣೆ ವಿಷಯದಲ್ಲಿ ಸೋತಿಲ್ಲ. ಎಲ್ಲರೂ ಒಟ್ಟಾಗಿ ಬದಲಾವಣೆಯ ಅವಶ್ಯಕತೆಯನ್ನು ಪ್ರತಿಪಾದಿಸಿದ್ದೇವೆ. ಸ್ಪಂದನೆ ದೊರೆಯದೇ ಹೋದಲ್ಲಿ ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ. ಆದರೆ, ಪಕ್ಷ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆಯಿದೆ. ಮಾಜಿ ಸಚಿವ ಬಸನಗೌಡ ಯತ್ನಾಳ್ ಶೀಘ್ರದಲ್ಲಿಯೇ ಮರಳಿ ಪಕ್ಷಕ್ಕೆ ಬರುವ ವಿಶ್ವಾಸವಿದೆ’ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಕೇಂದ್ರ ಸರ್ಕಾರ ಜಿಎಸ್‌ಟಿ ಪಾಲಿನ ಹಕ್ಕಿನ ಅನುದಾನ ನೀಡಿಲ್ಲ ಎಂದು ರಾಜಕೀಯವಾಗಿ ಆರೋಪಿಸಲಾಗುತ್ತಿದೆ. ಜಿಎಸ್‌ಟಿ ಮಂಡಳಿ ಸಮಿತಿ ಹಾಗೂ ಸಭೆಯಲ್ಲಿ ರಾಜ್ಯವೂ ಸದಸ್ಯತ್ವ ಹೊಂದಿದೆ. ಅಲ್ಲಿ ಬೇಡಿಕೆ ಸಲ್ಲಿಸಬೇಕೆ ಹೊರತು ರಾಜ್ಯದಲ್ಲಿ ಬಂದು ರಾಜಕೀಯ ಚರ್ಚೆ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

‘ವಿಬಿ ಜಿ ರಾಮ್ ಜಿ ಕಾಯ್ದೆಗೆ ಪಾರ್ಲಿಮೆಂಟ್‌ನಲ್ಲಿ ಅನುಮೋದನೆ ಪಡೆಯಲಾಗಿದೆ. ಮಹಾತ್ಮ ಗಾಂಧಿ ಹೆಸರು ತೆಗೆದಿರುವ ವಿಷಯವನ್ನು ರಾಜಕೀಯವಾಗಿ ಬಳಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ’ ಎಂದರು.

‘ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕ ಶಿಸ್ತು ಪಾಲನೆ ಮಾಡುವಲ್ಲಿ ವಿಫಲವಾಗಿದೆ. ಅನೇಕ ಏರುಪೇರುಗಳಿರಬಹುದು ಆದರೆ, ಆರ್ಥಿಕ ಶಿಸ್ತು ಕಾಪಾಡಲು ಕೇಂದ್ರದ ಮುಂದೆ ಬಾಕಿ ಹಣ ಪಡೆಯಲು ಪ್ರಯತ್ನಿಸಬೇಕೆ ಹೊರತು ಆರೋಪಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದು ತಿಳಿಸಿದರು.

ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಕೆ.ಎಂ.ಪಾಟೀಲ, ಡಾ.ನಾಗರಾಜ ಭಾಲ್ಕಿ, ಕಿರಣ ಬೆಲ್ಲಂ ಹಾಗೂ ನಾಗನಗೌಡ ಹರವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT