ADVERTISEMENT

ಗಬ್ಬೂರು: ಫೆ.4 ರವರೆಗೆ ಬೂದಿ ಬಸವೇಶ್ವರ ಜಾತ್ರೆ

ಸ್ವಯಂ ಪ್ರೇರಿತರಾಗಿ ಸೇವೆ ಮಾಡುವ ಜನ: ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 16:25 IST
Last Updated 29 ಜನವರಿ 2023, 16:25 IST
ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿರುವ ಬೂದಿ ಬಸವೇಶ್ವರ ಮಠ
ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿರುವ ಬೂದಿ ಬಸವೇಶ್ವರ ಮಠ   

ದೇವದುರ್ಗ: ಕರ್ನಾಟಕದ ಎರಡನೇ ಹಂಪಿ ಎಂದು ಹೆಸರಾಗಿರುವ ತಾಲ್ಲೂಕಿನ ಗಬ್ಬೂರು ಗ್ರಾಮ ಹಲವು ಪೌರಾಣಿಕ ವಿಶೇಷತೆಗಳನ್ನು ಹೊಂದಿದೆ. ಅದರಲ್ಲೂ ಪುರಾತನ ಬೂದಿ ಬಸವೇಶ್ವರ ಮಹಾಸಂಸ್ಥಾನ ಮಠ ಭಕ್ತರ ಆರಾಧನಾ ಕೇಂದ್ರ ವಾಗಿದೆ.

ಗಬ್ಬೂರು ಸೇರಿ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನ ಒಟ್ಟಾಗಿ ಜಾತ್ರೆ ಆಚರಿಸುತ್ತಾರೆ. ಪ್ರತಿವರ್ಷ ಮಾಘ ಮಾಸದಲ್ಲಿ ಮಠದ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಜಾತ್ರೆ ಆರಂಭವಾಗುವ ಒಂದು ತಿಂಗಳು ಮೊದಲೇ ಜನರು ಸ್ವಯಂ ಪ್ರೇರಿತರಾಗಿ ಮಠಕ್ಕೆ ಬಂದು ವಿವಿಧ ಸೇವೆಗಳನ್ನು ಸಲ್ಲಿಸುವುದು ರೂಢಿ.

ವಿಶ್ವಕರ್ಮ ಸಮುದಾಯದವರು ರಥ ಸಿದ್ಧಪಡಿಸುತ್ತಾರೆ. ಅದರ ದುರಸ್ತಿ ಕೈಗೊಳ್ಳುತ್ತಾರೆ. ಅಡುಗೆ ಮಾಡುವವರು, ಆಹಾರ ಧಾನ್ಯ ಕೂಡಿಸುವುದು, ಸ್ವಚ್ಛಗೊಳಿಸುವುದು, ನೀರಿನ ವ್ಯವಸ್ಥೆ ಮಾಡುವುದು, ಹೀಗೆ ಪ್ರತಿಯೊಂದು ಕೆಲಸವನ್ನೂ ಭಕ್ತರೇ ಖುದ್ದಾಗಿ ಮಾಡುತ್ತಾರೆ.

ADVERTISEMENT

ಗಬ್ಬೂರಿನ ಬೂದಿಬಸವೇಶ್ವರ ಮಹಾಸಂಸ್ಥಾನ ಮಠದಲ್ಲಿ ಸದ್ಯ 8ನೇ ಪೀಠಾಧಿಪತಿ ಬೂದಿ ಬಸವೇಶ್ವರ ಶಿವಾಚಾರ್ಯರು ಇದ್ದಾರೆ. ಜೂನ್‌ 20, 1999ರಲ್ಲಿ ಪೀಠ ವಹಿಸಿಕೊಂಡಿದ್ದಾರೆ. 600 ವರ್ಷಗಳ ಇತಿಹಾಸ ಇರುವ ಈ ಮಠದಲ್ಲಿ ಪ್ರತಿವರ್ಷ ಮಾಘ ಶುದ್ಧ ದ್ವಾದಶಿಯಂದು ರಥೋತ್ಸವ ಹಾಗೂ ಮಾಘ ಶುದ್ಧ ನವಮಿಯಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತದೆ.

40 ಸೇವಾ ಮನೆತನಗಳು: ಗಬ್ಬೂರಿನಲ್ಲಿ ಮಠಕ್ಕೆ 40 ಬಗೆಯ ಸೇವೆಗಳನ್ನು ಸಲ್ಲಿಸುವ 40 ಮನೆತನಗಳಿವೆ. ಈಗಲೂ ಸಂಪ್ರದಾಯ ಮುಂದುವರಿದಿದೆ. ರಥೋತ್ಸವದ ಸಂದರ್ಭದಲ್ಲಿ ಗಂಟೆ ಹೊಡೆಯುವವರು, ಪಲ್ಲಕ್ಕಿ ಸೇವೆ, ಹಿಲಾಲ್‌ ಹಿಡಿಯುವವರು, ರಥದ ಚಕ್ರ ಸಿದ್ಧಪಡಿಸುವವರು, ಮಠದ ಸ್ವಚ್ಛತೆ ಹೀಗೆ ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದು ಸೇವೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.