ADVERTISEMENT

’ಒಗಟಿನ ಮೂಲಕ ವಿಜ್ಞಾನಾಸಕ್ತಿ ಬೆಳೆಸುವುದು ವಿಶೇಷ’

‘ಮಕ್ಕಳಿಗಾಗಿ ಒಗಟಿನಲ್ಲಿ ವಿಜ್ಞಾನ’ ಕೃತಿ ಲೋಕಾರ್ಪಣೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 18:30 IST
Last Updated 9 ಜೂನ್ 2019, 18:30 IST
ರಾಯಚೂರಿನ ಕನ್ನಡ ಭವನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಕವಯತ್ರಿ ದೋಮ ಕೋಮಲ ಅವರು ಕೃತಿ ಕುರಿತು ಮಾತನಾಡಿದರು
ರಾಯಚೂರಿನ ಕನ್ನಡ ಭವನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಕವಯತ್ರಿ ದೋಮ ಕೋಮಲ ಅವರು ಕೃತಿ ಕುರಿತು ಮಾತನಾಡಿದರು   

ರಾಯಚೂರು: ಜನಪದರ ಬದುಕಿನಲ್ಲಿ ಒಗಟುಗಳು ಹಾಸುಹೊಕ್ಕಾಗಿವೆ. ಬುದ್ಧಿಯನ್ನು ತೀಕ್ಷ್ಣಗೊಳಿಸಲು, ಆಸಕ್ತಿ ಮತ್ತು ಕ್ರಿಯಾಶೀಲತೆ ಹುಟ್ಟುಹಾಕುವ ವಿಶೇಷ ಗುಣ ಒಗಟುಗಳಲ್ಲಿದೆ. ಇಂತಹ ಒಗಟುಗಳ ಮೂಲಕ ವಿಜ್ಞಾನದ ಅರಿವು ಮೂಡಿಸಲು ಪುಸ್ತಕ ಬರೆದಿರುವುದು ಅಭಿನಂದನೀಯ ಎಂದು ಸಾಹಿತಿ ವೀರಹನುಮಾನ ಹೇಳಿದರು.

ನಗರದ ಕನ್ನಡ ಭವನ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ವರಲಕ್ಷ್ಮೀ ಎ.ನಾಗರಾಜ ಅವರು ಬರೆದ ‘ಮಕ್ಕಳಿಗಾಗಿ ಒಗಟಿನಲ್ಲಿ ವಿಜ್ಞಾನ’ ಕೃತಿಯನ್ನು ಲೋರ್ಕಾಪಣೆಗೊಳಿಸಿ ಮಾತನಾಡಿದರು.

ಯಾವುದೇ ವಸ್ತು ಅಥವಾ ಸಾಧನಗಳ ಗುರುತನ್ನು ತಿರುವು ಮುರುವುಗೊಳಿಸಿ ಅಥವಾ ಹೋಲಿಕೆ ಕೊಟ್ಟು ಒಗಟು ಹೇಳಲಾಗುತ್ತದೆ. ಒಗಟು ಬಿಡಿಸಿ ಉತ್ತರ ಹೇಳುವುದಕ್ಕೆ ಚಾಣಾಕ್ಷತೆ ಮತ್ತು ಚಮತ್ಕಾರ ಇರಬೇಕು. ಕೊನೆಯಲ್ಲಿ ಉತ್ತರ ಗೊತ್ತಾದ ನಂತರ, ಎಷ್ಟು ಸರಳವಾಗಿದೆ ಎಂದು ಅನಿಸುತ್ತದೆ. ಬುದ್ಧಿವಂತಿಕೆ ಮತ್ತು ಮಕ್ಕಳಲ್ಲಿ ಆಸಕ್ತಿ ಹುಟ್ಟುಹಾಕಲು ಒಗಟುಗಳು ವಿಶೇಷ ಪ್ರಕಾರದ್ದಾಗಿವೆ ಎಂದು ತಿಳಿಸಿದರು.

ADVERTISEMENT

ವಿಜ್ಞಾನ ಕಲಿಯಬೇಕೆನ್ನುವ ಮಕ್ಕಳಿಗೆ ಈ ಕೃತಿಯು ಮಾರ್ಗದರ್ಶಕವಾಗಿದೆ. ದೇಶದಲ್ಲಿ ವಿಜ್ಞಾನವು ಅನಾದಿ ಕಾಲದಿಂದಲೂ ಬೆಳೆದು ಬಂದಿದೆ. ರಾಮಾಯಣ ಕಾಲದಲ್ಲಿ ಪುಷ್ಪಕ ವಿಮಾನದ ಪ್ರಸ್ತಾಪವಿದೆ. ಮಹಾಭಾರತದಲ್ಲಿ ಯಕ್ಷ ಪ್ರಶ್ನೆಗಳು ಎನ್ನುವ ಸಂದರ್ಭವಿದೆ. ಒಗಟುಗಳ ಮೂಲಕ ವಿಜ್ಞಾನವನ್ನು ಬೆಳೆಸುವ ಪ್ರಯತ್ನ ಉತ್ತಮವಾಗಿದೆ ಎಂದು ಹೇಳಿದರು.

ಕೃತಿ ಕುರಿತು ಮಾತನಾಡಿದ ಕವಯತ್ರಿ ದೋಮ ಕೋಮಲ, ಈ ಪುಸ್ತಕದಲ್ಲಿ ವಿವಿಧ ಆಯಾಮಗಳಲ್ಲಿ ಒಗಟುಗಳಿವೆ. ವಿಜ್ಞಾನದ ಬೇರೆ ಬೇರೆ ವಿಭಾಗಗಳಿಗೆ ಸಂಬಂಧಿಸಿದ ಒಗಟುಗಳಿವೆ. ವಿಜ್ಞಾನ ಓದುವುದಕ್ಕೆ ಪ್ರೇರೆಪಿಸುವ ಕೃತಿ ಇದಾಗಿದೆ. ಒಗಟುಗಳಲ್ಲಿ ಬಳಸಿದ ಪದಗಳು ಮಕ್ಕಳಿಗೆ ತುಂಬಾ ಹತ್ತಿರದಲ್ಲಿವೆ. ಆಪ್ತ ಎನಿಸುತ್ತವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಶಿಖರಮಠ ಮಾತನಾಡಿದರು. ಹರಿದಾಸ ಹವ್ಯಾಸಿ ಕಲಾವಿದರ ಸಂಘದ ಅಧ್ಯಕ್ಷ ಅರುಣ ವಿ. ಕಾಂತನವರ, ಸಾಹಿತಿಗಳಾದ ಎಸ್‌.ಎಂ. ಶಶಿಧರ, ಪಲುಗುಲ ನಾಗರಾಜ, ಪತ್ರಕರ್ತ ವೆಂಕಟೇಶ ಹೂಗಾರ ಇದ್ದರು.

ಮಕ್ಕಳ ಸಾಹಿತ್ಯ ಕೃತಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಬಿ. ಶೇಖರಪ್ಪ ಹುಲಿಗೇರಿ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿಗಳಾದ ರಾಮಣ್ಣ ಭೋಯೆರ್‌ ಸ್ವಾಗತಿಸಿದರು, ಬಿ. ವಿಜಯ ರಾಜೇಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.