ADVERTISEMENT

ಕೇಂದ್ರದ ಬಜೆಟ್: ಮಿಶ್ರ ಪ್ರತಿಕ್ರಿಯೆ

ರೈತರಿಗೆ ನೇರವಾಗಿ ಅನುಕೂಲವಾಗುವ ಯಾವುದೇ ಯೋಜನೆಗಳಿಲ್ಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 14:07 IST
Last Updated 1 ಫೆಬ್ರುವರಿ 2020, 14:07 IST
   

ರಾಯಚೂರು: ಕೇಂದ್ರ ಸರ್ಕಾರವು ಶನಿವಾರ ಮಂಡಿಸಿರುವ 2020–21ನೇ ಸಾಲಿನ ಬಜೆಟ್‌ ಕುರಿತು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೇಗನೆ ನಾಶವಾಗುವ ಕೃಷಿ ಉತ್ಪನ್ನಗಳನ್ನು ಸಾಗಿಸಲು ವಿಮಾನ ಯೋಜನೆ ಘೋಷಿಸಿದ್ದು, ಇದರಿಂದ ರೈತರಿಗೆ ಅನುಕೂಲವಿಲ್ಲ. ಮಧ್ಯವರ್ತಿಗಳು ಮಾತ್ರ ಉದ್ಧಾರವಾಗುತ್ತಾರೆ ಎನ್ನುವ ಟೀಕೆ ವ್ಯಕ್ತವಾಗಿದೆ. ಕೇಂದ್ರದ ಬಜೆಟ್‌ನಲ್ಲಿ ಈ ಸಲ ನೇರ ತೆರಿಗೆ ಪಾವತಿಸುವವರಿಗೆ ವಿಶೇಷ ರಿಯಾಯ್ತಿ ನೀಡಿರುವುದು ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚು ಅನುದಾನ ಒದಗಿಸಿರುವುದನ್ನು ಕೆಲವರು ಸ್ವಾಗತಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿರುವ ಜನರ ಅಭಿಪ್ರಾಯ ಹೀಗಿದೆ...

ರೈತರಿಗೆ ನಿರಾಸೆ

ADVERTISEMENT

ಕೃಷಿ ಕ್ಷೇತ್ರ ಪುನಶ್ಚೇತನ ಆಗುವ ಯಾವುದೇ ಯೋಜನೆ ಘೋಷಿಸಿಲ್ಲ. ರೈತರು ಬೆಳೆದ ಉತ್ಪನ್ನಕ್ಕೆ ಯೋಗ್ಯ ದರ ದೊರಕಿಸಲು ಕ್ರಮ ಕೈಗೊಂಡಿಲ್ಲ. ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಯಾವುದೇ ದೂರದೃಷ್ಟಿ ಹೊಂದಿಲ್ಲ. ಕೃಷಿ ಕ್ಷೇತ್ರದಲ್ಲಿ ಮಧ್ಯವರ್ತಿಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಘೋಷಿಸಿಲ್ಲ. 2022 ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡುವುದಕ್ಕೆ ಯೋಜನೆಗಳನ್ನು ಪ್ರಕಟಿಸಿಲ್ಲ.

–ಚಾಮರಸ ಮಾಲಿಪಾಟೀಲ, ರೈತ ಮುಖಂಡರು

***

ಬಂಡವಾಳಶಾಹಿ ಕೈಗೆ ದೇಶ

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಎಚ್‌ಎಎಲ್ ಸಂಸ್ಥೆಯನ್ನು ಹಾಳು ಮಾಡಿದ ಬಳಿಕ ಇದೀಗ ಎಲ್ಐಸಿ ಕಂಪನಿಯನ್ನು ಸಹ ಖಾಸಗಿಯವರ ಒಡೆತನಕ್ಕೆ ನೀಡಲು ಕೇಂದ್ರ ಸರ್ಕಾರ ಯೋಜಿಸಿದೆ. ಕೇಂದ್ರ ಸರ್ಕಾರದ ನಿರ್ಧಾರವು, ಮುಂದಿನ ದಿನಗಳಲ್ಲಿ ದೇಶವನ್ನು ಬಂಡವಾಳಶಾಹಿಗಳ ಕೈಯಲ್ಲಿ ಕೊಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಅಲ್ಲದೆ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬುದಕ್ಕೆ ಪುಷ್ಟಿ ನೀಡುವ ಯಾವುದೇ ಒಂದೇ ಒಂದು ಯೋಜನೆಗಳನ್ನು ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಪ್ರಕಟಿಸಿಲ್ಲ. ಹಾಗಾಗಿ ಈ ಬಜೆಟ್ ಯುವಕರ ವಿರೋಧಿ ಬಜೆಟ್, ಬಂಡವಾಳಶಾಹಿ ಪರ ಬಜೆಟ್ ಎಂದು ಹೇಳಬಹುದು.

-ರಮೇಶ ಗೌಡೂರು, ವಿದ್ಯಾರ್ಥಿ, ಜಾಲಹಳ್ಳಿ

***

ಸರ್ವರಿಗೂ ಒಪ್ಪಿತ

ಕೃಷಿ ಕ್ಷೇತ್ರದಲ್ಲಿ ವಿನೂತನ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಅದೇ ರೀತಿ ವಾಣಿಜ್ಯ ಕ್ಷೇತ್ರದ ಉತ್ತೇಜನಕ್ಕೆ ಯೋಜನೆಗಳನ್ನು ಪ್ರಸ್ತಾಪಿಸಿದೆ. ಮುಖ್ಯವಾಗಿ ನೇರ ತೆರಿಗೆ ಪಾವತಿಸುತ್ತಿದ್ದ ಜನರಿಗೆ ಕೇಂದ್ರ ಬಜೆಟ್‌ ಒಳ್ಳೆಯ ರಿಯಾಯ್ತಿ ಘೋಷಿಸಿದೆ. ಇದು ಸರ್ವರಿಗೂ ಒಪ್ಪಿತವಾಗುವ ಬಜೆಟ್‌ ಎಂಬುದರಲ್ಲಿ ಸಂಶಯವಿಲ್ಲ.

–ತ್ರಿವಿಕ್ರಮ ಜೋಷಿ, ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಅಧ್ಯಕ್ಷ

***

ರೈತರ ಬಜೆಟ್

ಇದು ರೈತರ ಅಭಿವೃದ್ಧಿಯ ಬಜೆಟ್ ಆಗಿದೆ. ಜಲಕ್ಷಾಮ ಸಮಸ್ಯೆಯುಳ್ಳ ಜಿಲ್ಲೆಗಳಿಗೆ ಸಮಗ್ರ ಕಾರ್ಯಸೂಚಿ, ರೈತರ ಆದಾಯ ದ್ವಿಗುಣಗೊಳಿಸುವ ಬದ್ಧತೆ.ಪ್ರಧಾನ ಮಂತ್ರಿ, ಕೃಷಿ ಸಮ್ಮಾನ್ ಯೋಜನಾ ಸೇರಿದಂತೆ ಹಲವು ಯೋಜನೆಗಳ ಮೂಲಕ ರೈತರ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಕ್ರಮ ವಹಿಸಲಾಗಿದೆ. ಜನರ ಆದಾಯ ಮತ್ತು ಖರೀದಿ ಶಕ್ತಿಯನ್ನು ವೃದ್ಧಿಸುವ ಗುರಿಯನ್ನು ಈ ಬಾರಿಯ ಬಜೆಟ್ ಹೊಂದಿದೆ.

– ಗಣೇಶ, ಶಕ್ತಿನಗರ

***

ಬದಲಾವಣೆಯ ಬಜೆಟ್

ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದಾರೆ. ನೇರ ನಗದು ವರ್ಗಾವಣೆಯಿಂದ ಜನರಿಗೆ ಲಾಭವಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ಆರೋಗ್ಯ ವಿಮೆ, ಅಪಘಾತ ವಿಮೆ, ಪೇಮೆಂಟ್ ಗೇಟ್ ವೇ ಸೇರಿದಂತೆ ಹಲವು ಯೋಜನೆಗಳು ಜನರಿಗೆ ತಲುಪಿಸುವ ಕೆಲಸ ಮಾಡುವ ಮೂಲಕ ಉತ್ತಮ ಬಜೆಟ್ ಮಂಡಿಸಿದ್ದಾರೆ.

–ಗೀತಾ ಪಾಟೀಲ,ಶಕ್ತಿನಗರ

ಸಮತೋಲಿತ ಬಜೆಟ್‌

ಕೇಂದ್ರ ಸರ್ಕಾರದ ಬಜೆಟ್ ದೂರದರ್ಶಿತ್ವವನ್ನು ಹೊಂದಿದ ಸಮತೋಲಿತ ಬಜೆಟ್‌ ಆಗಿದೆ. ಆರ್ಥಿಕತೆಯ ಸುಧಾರಣೆಗಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನೇಕ ರಿಯಾಯಿತಿ ಮತ್ತು ಯೋಜನೆಗಳನ್ನು ರೂಪಿಸಿದ್ದಾರೆ. ಈ ಬಜೆಟ್‌ನಿಂದ ಜನಸಾಮಾನ್ಯರು ಖರ್ಚು ಮಾಡುವ ಮಿತಿಯಲ್ಲಿ ಸ್ವಲ್ಪ ಏರಿಕೆಯಾಗಲಿದೆ. ಎಫ್‌ಎಂಸಿಜಿ ವಸ್ತುಗಳು ಮತ್ತು ಗೃಹಬಳಕೆ ವಸ್ತುಗಳ ಬೇಡಿಕೆ ಹೆಚ್ಚಾಗಲಿದೆ. ಸಿಮೆಂಟ್‌, ಕಬ್ಬಿಣ, ಕಟ್ಟಡ ಸಾಮಾಗ್ರಿಗಳಿಗೆ ಬೇಡಿಕ ಹೆಚ್ಚಾಗಲಿದೆ. ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುದಾನ ಮೀಸಲಿಡಲಾಗಿದೆ. ವಿಮಾನಯಾನವು ಉತ್ತೇಜನಕರವಾಗಲಿದೆ. ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು 2022ರಲ್ಲಿ ಕೃಷಿಕನ ಆದಾಯ ದ್ವಿಗುಣಗುಳಿಸುವ ಗುರಿ ಹೊಂದಲಾಗಿದೆ.

–ರಂಗನಾಥ ನುಲಿಕರ್‌, ಮಾನ್ವಿ

***

ಯೋಜನೆ ಸಹಕಾರಿ

ರೈತರ ಜಮೀನುಗಳಿಗೆ ಅನುಕೂಲಕ್ಕಾಗಿ ಸೋಲಾರ್ ಪಂಪ್ ಸೆಟ್ ಯೋಜನೆ ಉತ್ತಮ ಯೋಜನೆಯಾಗಿದ್ದು, ಅದು ಪ್ರತಿಯೊಬ್ಬ ರೈತನಿಗೂ ತಲುಪುವಂತಾಗಬೇಕು, ಇದರಿಂದ ವಿದ್ಯುತ್ ನಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ಅಗತ್ಯ ಸಹಕಾರಿಯಾಗಿಲಿದೆ. ಇನ್ನುಳಿದ ರೈತ ಮತ್ತು ಕೃಷಿಗೆ ಸಂಭಂದಿಸಿದ ಯೋಜನೆಗಳು ಉತ್ತಮವಾಗಿವೆ.

–ನಾಗರಾಜಗೌಡ ನಂದರೆಡ್ಡಿ, ರೈತ ಸಿರವಾರ

***

ತೆರಿಗೆ ಸರಿಯಲ್ಲ

ಕೇಂದ್ರ ಸರ್ಕಾರದ ಬಜೇಟ್ ಉತ್ತಮವಾಗಿದೆ. ದೇಶದ ಇವತ್ತಿನ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಬಜೇಟ್ ಅನ್ನು ನಾವು ಒಪ್ಪಿಕೊಳ್ಳಲೇಬೇಕು.‌ ಆದರೆ, ಸಹಕಾರಿ ಸಂಸ್ಥೆಗಳ ಮೇಲೆ ಶೇ 22 ಮತ್ತು ಸೆಸ್ ಸೇರಿ 25 ರಷ್ಟು ತೆರಿಗೆ ಹಾಕಿದ್ದು ಸರಿಯಲ್ಲ‌. ಇದು ಸಹಕಾರಿ ಹಣಕಾಸು ಸಂಸ್ಥೆಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಕೇಂದ್ರ ಸರ್ಕಾರ ಸಹಕಾರಿ ಸಂಸ್ಥೆಗಳ ಮೇಲಿನ ತೆರಿಗೆಯನ್ನು ಮರು ಪರಿಶೀಲನೆ ಮಾಡುವುದು ಸೂಕ್ತ

- ಪಂಪಣ್ಣ ಗುಂಡಳ್ಳಿ, ವಾಣಿಜ್ಯೋದ್ಯಮಿ ಮಸ್ಕಿ

***

ಲಾಭವಿಲ್ಲ

ಐದು ಲಕ್ಷದಿಂದ ₹10 ಲಕ್ಷದವರೆಗೆ ಕಳೆದ ವರ್ಷ ಶೇ 20 ರಷ್ಟು ತೆರಿಗೆ ಇತ್ತು. ಈಗ ಶೇ.15ಕ್ಕೆ ಇಳಿಸಲಾಗಿದೆ. ಇದರಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಲಾಭವಿಲ್ಲ. ಬಹುದೊಡ್ಡ ವ್ಯಾಪಾರಸ್ಥರಿಗೆ ಮಾತ್ರ ಲಾಭ. ಜಿಎಸ್‌ಟಿ ತೆರಿಗೆಯಿಂದ ಮೊದಲೇ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದರು. ಈಗಲೂ ಈ ಬಜೆಟ್ ವ್ಯಾಪಾರಿಗಳಿಗೆ ನಿರಾಶದಾಯಕವಾಗಿದೆ.

-ಪೂಜಪ್ಪ ಪೂಜಾರಿ, ಕಾರ್ಯದರ್ಶಿ ವರ್ತಕರ ಸಂಘ ಸಿಂಧನೂರು

***

ಜನಪರ

ಮೋದಿ ಸರ್ಕಾರದ ಬಜೆಟ್ ಜನಪರವಾಗಿದೆ. ₹5 ಲಕ್ಷದವರೆಗೆ ತೆರಿಗೆ ವಿನಾಯಿತಿ ಕೊಟ್ಟಿರುವುದು ಒಂದಷ್ಟು ಖುಷಿ ತಂದಿದೆ. ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ. ವ್ಯಾಪಾರಸ್ಥರಿಗೆ ಈ ಬಜೆಟ್ ಸಹಾಯವಾಗಲಿದೆ. ಎಲ್ಲ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಬಲಗೊಳ್ಳಲಿದೆ.

-ಗೌತಮ್ ಮೆಹ್ತಾ, ವ್ಯಾಪಾರಸ್ಥ, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.