ಸಿಂಧನೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್‍ವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಅಸುನೀಗಿದ ಘಟನೆ ಶುಕ್ರವಾರ ಬೆಳಗಿನ ಜಾವ ಸುಮಾರು 3.15 ಗಂಟೆಗೆ ಸಂಭವಿಸಿದೆ.
ರಾಚಪ್ಪ ಕಾಳಪ್ಪ ರಘುನಾಥಹಳ್ಳಿ (51) ಮೃತ ಚಾಲಕ. ರಾಯಚೂರು ಡಿಪೊ 3ರ ಕೆ.ಎ.36–ಎಫ್-1253 ಸಂಖ್ಯೆಯ ಸ್ಲೀಪರ್ ಕೋಚ್ ಬಸ್ ಗುರುವಾರ ರಾತ್ರಿ 10.30ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾಯಚೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಿಂಧನೂರಿನ ವೀಣಾ ಬಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ವೇಳೆ ಬಸ್‍ನಿಂದ ಹೊರಗೆ ಜಿಗಿಯಲು ಪ್ರಯತ್ನಿಸಿ ಬಸ್‍ನ ಕೆಳಭಾಗಕ್ಕೆ ಸಿಲುಕಿದ ಚಾಲಕ ರಾಚಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಸ್‍ನಲ್ಲಿದ್ದ ಒಂಬತ್ತು ಪ್ರಯಾಣಿಕರ ಪೈಕಿ ಸಂತೋಷಕುಮಾರ ಹುಬ್ಬಳ್ಳಿ (34) ಎಂಬುವರ ತಲೆಗೆ ತೀವ್ರ ಪೆಟ್ಟಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಧಾವಿಸಿದ ಸಂಚಾರ ಮತ್ತು ಶಹರ್ ಠಾಣೆ ಪೊಲೀಸರು ಗಂಗಾವತಿ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಬಸ್‍ನ್ನು ಎರಡು ಕ್ರೇನ್‍ಗಳ ನೆರವಿನಿಂದ ಎತ್ತಿ ಬಸ್ ಅಡಿಯಲ್ಲಿ ಸಿಲುಕಿದ್ದ ಚಾಲಕನ ಮೃತದೇಹ ಹೊರಗೆ ತೆಗೆದರು.
ಗಾಯಾಳುಗಳನ್ನು ಸ್ಥಳೀಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಅಪಘಾತದಲ್ಲಿ ಬಸ್ ನಜ್ಜುಗುಜ್ಜಾಗಿದ್ದು, ಬಸ್‍ನಿಂದ ಸೋರುತ್ತಿದ್ದ ಡಿಸೇಲ್‍ನ್ನು ಬಸ್ ಡಿಪೊದ ಮೆಕ್ಯಾನಿಕ್‌ಗಳು ಕ್ಯಾನ್‍ಗಳಲ್ಲಿ ತುಂಬಿಕೊಂಡು ಡಿಪೊಗೆ ಕೊಂಡೊಯ್ದರು.
ಡಿವೈಎಸ್‍ಪಿ ಬಿ.ಎಸ್.ತಳವಾರ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುಧೀರ್ ಕುಮಾರ ಬೆಂಕಿ, ಸಂಚಾರ ಪೊಲೀಸ್ ಠಾಣೆಯ ಸಬ್‍ಇನ್‌ಸ್ಪೆಕ್ಟರ್ ವೆಂಕಟೇಶ ಚವ್ಹಾಣ್, ಅಪರಾಧ ವಿಭಾಗದ ಸಬ್‍ಇನ್‌ಸ್ಪೆಕ್ಟರ್ ಬೆಟ್ಟಪ್ಪ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ತಾಂತ್ರಿಕ ಎಂಜಿನಿಯರ್ ಹಸನ್‍ಅಲಿ, ವಿಭಾಗೀಯ ಸಂಚಾರ ನಿಯಂತ್ರಣ ಅಧಿಕಾರಿ ಚಂದ್ರಶೇಖರ, ಸಿಂಧನೂರು ಡಿಪೊ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ, ಸಂಚಾರ ನಿಯಂತ್ರಕರಾದ ಉಮಾಪತಿ, ಶರಣಪ್ಪ, ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.