
ಕವಿತಾಳ: ಸಮೀಪದ ಕೊಟೇಕಲ್ ಕ್ರಾಸ್‌ನಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಬುಧವಾರ ವಾಹನ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಲಿಂಗಸುಗೂರು ರಾಯಚೂರು ಹೆದ್ದಾರಿಯಲ್ಲಿ ಸಂಚರಿಸುವ ಬಹುತೇಕ ಬಸ್‌ಗಳು ಕೊಟೇಕಲ್ ಕ್ರಾಸ್‌ನಲ್ಲಿ ನಿಲುಗಡೆ ಮಾಡದ ಕಾರಣ ಕವಿತಾಳ, ಪಾಮನಕಲ್ಲೂರು ಮತ್ತು ಲಿಂಗಸುಗೂರು ಸೇರಿದಂತೆ ವಿವಿಧೆಡೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ತಡೆರಹಿತ ಬಸ್ ಸೇರಿದಂತೆ ಹಲವು ಬಸ್ ಗಳು ಕೊಟೇಕಲ್‌ಗೆ ನಿಲುಗಡೆ ಮಾಡುತ್ತಿಲ್ಲ, ನಿತ್ಯ ನೂರಾರು ವಿದ್ಯಾರ್ಥಿಗಳು ಪಟ್ಟಣಗಳಿಗೆ ಹೋಗುತ್ತಿದ್ದು ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ಹೋಗಲು ಸಾಧ್ಯವಾಗದೆ ಕಲಿಕೆಗೆ ತೊಂದರೆಯಾಗಿದೆʼ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
‘ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದಾಗ ಶಾಲಾ, ಕಾಲೇಜು ಸಮಯಕ್ಕೆ ಸರಿಯಾಗಿ ಬರುವ ಎಂಟು ಬಸ್ ಗಳ ನಿಲುಗಡೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಇತ್ತೀಚೆಗೆ ಅದೇ ಬಸ್ ಗಳು ಇಲ್ಲಿ ನಿಲುಗಡೆ ಮಾಡುತ್ತಿಲ್ಲ, ಈ ಬಗ್ಗೆ ಕೇಳಿದರೆ ನಿರ್ವಾಹಕ ಮತ್ತು ಚಾಲಕರು ಡಿಪೊ ವ್ಯವಸ್ಥಾಪಕರನ್ನು ಕೇಳಿ ಎನ್ನುತ್ತಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ನಾಯಕ ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಕವಿತಾಳ ಠಾಣೆ ಪೊಲೀಸರು ಲಿಂಗಸುಗೂರು ಡಿಪೊ ವ್ಯವಸ್ಥಾಪಕರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಗ್ರಾಮದ ಶಿವರಾಜ, ಸರಸ್ವತಿ ವಕೀಲೆ, ಭೀಮಣ್ಣ ತುರ್ವಿಹಾಳ, ಆಂಜನೇಯ ದೇಸಾಯಿ, ಬಸವರಾಜ ಹೆಸರೂರು, ಹನುಮಂತರಾಯಗೌಡ, ಅಮರೇಶ, ಬಸವರಾಜ ಕರ್ನಾಳ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದಿಢೀರ್ ಪ್ರತಿಭಟನೆ ಸಾಲುಗಟ್ಟಿ ನಿಂತ ವಾಹನಗಳು | ಬಸ್ ನಿಲುಗಡೆ ಮಾಡದ ಚಾಲಕ | ನಿರ್ವಾಹಕರ ವಿರುದ್ದ ಕ್ರಮ | ನಿಲುಗಡೆ ಮಾಡದಿದ್ದರೆ ರಸ್ತೆ ತಡೆದು ಪ್ರತಿಭಟನೆಗೆ ನಿರ್ಧಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.