ಸಾಂದರ್ಭಿಕ ಚಿತ್ರ
ರಾಯಚೂರು: ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತ ಸಮೀಕ್ಷೆ ನಡೆಸಿದ ಗಣತಿದಾರರು ಮೊದಲು ದಿನವೇ ಕೆಲವು ಕಡೆ ತಾಂತ್ರಿಕ ಸಮಸ್ಯೆ ಎದುರಿಸಿದರು. ಸಿರವಾರ ತಾಲ್ಲೂಕಿನಲ್ಲಿ ಶೈಕ್ಷಣಿಕ ಸಮೀಕ್ಷೆಯ ಕಿಟ್ ವಿತರಣೆ ವಿಳಂಬವಾದ ಕಾರಣ ಸಮೀಕ್ಷೆ ಒಂದು ದಿನ ಮುಂದೂಡಲಾಗಿದೆ.
ಮಾನ್ವಿ, ದೇವದುರ್ಗ, ಲಿಂಗಸುಗೂರು, ಮಸ್ಕಿಯಲ್ಲಿ ಗಣತಿದಾರರು ಆ್ಯಪ್ ಡೌನ್ ಲೋಡ್ ಮಾಡಿಕೊಂಡರೂ ದಾಖಲೆ ಮಾಡಿಕೊಳ್ಳುವಾಗ ಫೋನ್ ಸಂಖ್ಯೆಗೆ ಒಟಿಪಿ ಸಂಖ್ಯೆ ಬರಲಿಲ್ಲ. ಗಣತಿದಾರರಿಗೆ ತಾಂತ್ರಿಕ ಅಡಚಣೆ ಕಂಡು ಬಂದಿತು.
ಸಿಂಧನೂರು ತಾಲ್ಲೂಕಿನ ಜಾಲಿಹಾಳ್ ಬಸಾಪುರ ರೌಡಕುಂದ ಹೊಸಳ್ಳಿ ಪಂಚಾಯಿತಿಯಲ್ಲಿ ಜೆಸ್ಕಾಂ ಮನೆಗಳ ಮೀಟರ್‌ಗಳಿಗೆ ಸ್ಟಿಕರ್ ಹಚ್ಚಿಲ್ಲ. ಹೀಗಾಗಿ ಕುಟುಂಬದವರ ಪಟ್ಟಿಯೇ ಲಭ್ಯವಾಗಲಿಲ್ಲ. ಮಧ್ಯಾಹ್ನ 1 ಗಂಟೆಗೆ ಆ್ಯಪ್ ಡೌನ್‌ಲೋಡ್ ಮಾಡಿದರೂ ಅದು ಕಾರ್ಯನಿರ್ವಹಿಸಲಿಲ್ಲ.
ಸಮೀಕ್ಷೆಯ ವೇಳೆ ಮನೆಯ ಕುಟುಂಬದ ಮುಖ್ಯಸ್ಥನ ಮೊಬೈಲ್ ಸಂಖ್ಯೆಗೆ ಒಟಿಪಿ ಕಡ್ಡಾಯವಾಗಿದೆ. ರೈತರು ಬೆಳಿಗ್ಗೆ ಎದ್ದು ಹೊಲಕ್ಕೆ ಹೋಗಿ ಸಂಜೆಗೆ ಮನೆ ಬರುವ ಕಾರಣ ಗಣತಿದಾರರು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆಧಾರ್ ಕಾರ್ಡ್‌ಗಳಲ್ಲಿ ನಮೂದಿಸಿದ ನಂಬರ್ ಕೆಲವರ ಬಳಿ ಇಲ್ಲ. ಹೀಗಾಗಿ ಒಟಿಪಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
‘ಕುಟುಂಬದ ಮುಖ್ಯಸ್ಥರನ ಬದಲಿಗೆ ಕೂಡು ಕುಟುಂಬದ ಯಾರಾದರೂ ಒಬ್ಬ ಮುಖ್ಯಸ್ಥರ ಮೊಬೈಲ್ ಸಂಖ್ಯೆಗೆ ಒಟಿಪಿಗೆ ಅವಕಾಶ ನೀಡವಂತೆ ರಾಜ್ಯ ಹಿಂದುಳಿದ ಆಯೋಗಕ್ಕೆ ಮನವಿ ಮಾಡಲಾಗುವುದು‘ ಎಂದು ರಾಯಚೂರು ಉಪ ವಿಭಾಗಾಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.