ADVERTISEMENT

ಸಂಭ್ರಮದಿಂದ ನೆರವೇರಿದ ಪೂರ್ವಾರಾಧನೆ

ತುಂಗಭದ್ರಾ ನದಿಯಲ್ಲಿ ಮಿಂದು ಪುಣೀತರಾದ ಭಕ್ತರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 13:23 IST
Last Updated 23 ಆಗಸ್ಟ್ 2021, 13:23 IST
ಮಂತ್ರಾಲಯ ಮಠದ ಹಿಂಭಾಗ ಬೆಂಗಳೂರಿನ ಸುಗುಣಾ ಬಿಲ್ಡರ್ಸ್‌ ಆ್ಯಂಡ್‌ ಡೆವಲಪರ್ಸ್‌ ನಿರ್ಮಿಸಿ ದೇಣಿಗೆ ನೀಡಿದ ನೂತನ ಭೋಜನಶಾಲೆ ‘ಗುರುರಾಜಾಂಗಣ’ವನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮಂಗಳವಾರ ಉದ್ಘಾಟಿಸಿದರು.
ಮಂತ್ರಾಲಯ ಮಠದ ಹಿಂಭಾಗ ಬೆಂಗಳೂರಿನ ಸುಗುಣಾ ಬಿಲ್ಡರ್ಸ್‌ ಆ್ಯಂಡ್‌ ಡೆವಲಪರ್ಸ್‌ ನಿರ್ಮಿಸಿ ದೇಣಿಗೆ ನೀಡಿದ ನೂತನ ಭೋಜನಶಾಲೆ ‘ಗುರುರಾಜಾಂಗಣ’ವನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮಂಗಳವಾರ ಉದ್ಘಾಟಿಸಿದರು.   

ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವದ ನಿಮಿತ್ತ ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿದ್ದು, ಮೂರನೇ ದಿನ ಸೋಮವಾರ ಪೂರ್ವಾರಾಧನೆಯನ್ನು ವಿಧಿವತ್ತಾಗಿ ನೆರವೇರಿಸಲಾಯಿತು.

ಬೆಳಗಿನ ಜಾವದಿಂದ ಮೂಲವೃಂದಾವನಕ್ಕೆ ವಿಶೇಷ ಪೂಜೆ, ಮಹಾಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ವಸ್ತ್ರಾಲಂಕಾರವನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ನೆರವೇರಿಸಿದರು.

ಮೂಲರಾಮದೇವರ ಪೂಜೆ, ಮಂಗಳಾರತಿ ಬಳಿಕ ವಿಪ್ರರಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನು ಶ್ರೀಗಳು ಮಾಡಿದರು. ಪ್ರತಿವರ್ಷವೂ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ವರ್ಷವೂ ಕೋವಿಡ್‌ ಇರುವುದರಿಂದ ನಿರೀಕ್ಷಿತ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿಲ್ಲ. ಆದರೆ ಕೊವಿಡ್‌ ನಿಯಮ ಪಾಲನೆಯೊಂದಿಗೆ ಆರಾಧನೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಮಠಕ್ಕೆ ಭೇಟಿನೀಡಿ ರಾಯರ ದರ್ಶನ ಪಡೆದು ಹೋಗುತ್ತಿದ್ದಾರೆ. ಪ್ರತಿವರ್ಷದಂತೆ ಆರಾಧನಾ ಮಹೋತ್ಸವಕ್ಕಾಗಿ ವಾಸ್ತವ್ಯ ಉಳಿದುಕೊಳ್ಳುವವರ ಸಂಖ್ಯೆ ಕಡಿಮೆ ಇದೆ.

ADVERTISEMENT

ಪುಷ್ಪಾಲಂಕಾರ: ಮಠದ ಹೊರಭಾಗ ಮತ್ತು ಪ್ರಾಕಾರದುದ್ದಕ್ಕೂ ಬಣ್ಣಬಣ್ಣದ ಪುಷ್ಪಾಲಂಕಾರ ಮಾಡಲಾಗಿದೆ. ಹೂವುಗಳನ್ನು ಅಂದವಾಗಿ ಜೋಡಿಸಿದ್ದು, ರಾಯರ ಉತ್ಸವದ ಸಂಭ್ರಮವನ್ನು ಇಮ್ಮಡಿಸಿದೆ.

ಯತಿವರ್ಯರ ಬೃಂದಾವನಗಳಿಗೆ ಸಮರ್ಪಿಸಿರುವ ಹೂಮಾಲೆಗಳ ಅಲಂಕಾರವು ನಯನ ಮನೋಹರವಾಗಿವೆ. ಅಬಾಲವೃದ್ಧರಾದಿಯಾಗಿ ಮಂತ್ರಾಲಯಕ್ಕೆ ಭಕ್ತರು ಮಾಸ್ಕ್‌ ಧರಿಸಿಕೊಂಡು ಭೇಟಿ ನೀಡುತ್ತಿದ್ದಾರೆ. ಉರುಳಿ ಸೇವೆ ಸಲ್ಲಿಸುವುದು, ಹೆಜ್ಜೆ ಸೇವೆ, ದೀರ್ಘದಂಡ ನಮಸ್ಕಾರ ಮಾಡುವುದು ಸೇರಿದಂತೆ, ಭಕ್ತರು ಸಂಕಲ್ಪ ಮಾಡಿಕೊಂಡಿರುವ ಹರಕೆಯನ್ನು ತೀರಿಸುತ್ತಿದ್ದಾರೆ.

ಮಠದ ಮುಖ್ಯದ್ವಾರದಿಂದ ರಥಬೀದಿ ಮಾರ್ಗದುದ್ದಕ್ಕೂ ತಳೀರು ತೋರಣಗಳಿಂದ ಸಿಂಗರಿಸಲಾಗಿದೆ. ಇಡೀ ಮಠದ ಆವರಣದೊಳಗೆ ಮತ್ತು ಹೊರಗಡೆ ಎಲ್‌ಇಡಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಹುಬ್ಬಳ್ಳಿಯ ರವಿ ಆಚಾರ್ಯ ಮುತ್ತಿಗೆ ಅವರು ‘ಪುರಾಣ ಪ್ರಸ್ತಾನಕ್ಕೆ ಶ್ರೀರಾಯರ ಕೊಡುಗೆ’ ಕುರಿತು ಉಪನ್ಯಾಸ ನೀಡಿದರು. ಬೆಂಗಳೂರಿನ ವಿದ್ವಾನ್‌ ಬೆಟ್ಟ ವೆಂಕಟೇಶ ಹಾಗೂ ತಂಡದಿಂದ ತಾಳ ವಾದ್ಯ ಕಚೇರಿ, ಬೆಂಗಳೂರಿನ ವಿದ್ವಾನ್‌ ಗಿರಿಧರ ಹಾಗೂ ತಂಡದಿಂದ ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಬೆಂಗಳೂರಿನ ಕಲಾಬಿಂದು ತಂಡದಿಂದಭರತನಾಟ್ಯ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.