ADVERTISEMENT

ಸಿಇಟಿ: ದಾಖಲೆಗಳ ಪರಿಶೀಲನೆ ನಾಳೆಯಿಂದ

ರಾಯಚೂರಿನ ಎಸ್‌ಎಲ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪರಿಶೀಲನಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:46 IST
Last Updated 4 ಜೂನ್ 2019, 19:46 IST

ರಾಯಚೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಪಿಯುಸಿ–ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಪಡೆದಿರುವ ರ‍್ಯಾಂಕಿಂಗ್‌ ಅನುಸಾರವಾಗಿ ದಾಖಲೆಗಳ ಪರಿಶೀಲನೆಯು ಜೂನ್‌ 6 ರಿಂದ ಆರಂಭವಾಗಲಿದೆ.

ಯರಮರಸ್‌ ಬಳಿ ಇರುವ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಎಸ್‌ಎಲ್ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ದಾಖಲೆಗಳ ಪರಿಶೀಲನೆಗಾಗಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ರ‍್ಯಾಂಕಿಂಗ್‌ ಅನುಸಾರ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆ ಮಾಡಲಾಗುವುದು.

‘ಈ ಭಾಗದಲ್ಲಿ ಆರಂಭಿಕ ರ‍್ಯಾಂಕಿಂಗ್‌ ಪಡೆದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಜೂನ್‌ 9 ರ ನಂತರದಲ್ಲಿ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ. ದಾಖಲೆಗಳ ಪರಿಶೀಲನೆಗಾಗಿ ಎರಡು ಕೌಂಟರ್‌ಗಳನ್ನು ತೆರೆಯಲಾಗಿದೆ. ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ಪುಸ್ತಕ ಕೊಡಲಾಗಿದೆ. ಏನಾದರೂ ಗೊಂದಲವಿದ್ದರೆ ಮತ್ತೆ ಪರಿಹರಿಸಲಾಗುವುದು’ ಎಂದು ಸಿಇಟಿ ರಾಯಚೂರು ಸಹಾಯವಾಣಿ ಕೇಂದ್ರದ ನೋಡಲ್‌ ಅಧಿಕಾರಿ ಸದಾಶಿವಪ್ಪ ಅವರು ’ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

371–ಜೆ ಪ್ರಮಾಣಪತ್ರದಡಿಯಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಯಾ ಉಪವಿಭಾಗಾಧಿಕಾರಿ ಸಹಿ ಇರುವ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಆರಂಭದ ಸಂಖ್ಯೆಯ ರ‍್ಯಾಂಕಿಂಗ್‌ ಪಡೆದ ವಿದ್ಯಾರ್ಥಿಗಳು ನಿಗದಿತ ದಿನದಂದು ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಾಗದಿದ್ದರೆ, ಜೂನ್‌ 19 ರೊಳಗೆ ಮತ್ತೊಂದು ದಿನದಲ್ಲಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬಹುದಾಗಿದೆ.

ಜೂನ್‌ 6 ರಂದು 1 ರಿಂದ 2 ಸಾವಿರ ರ‍್ಯಾಂಕಿಂಗ್‌, ಜೂನ್‌ 7 ರಂದು 2001 ರಿಂದ 5 ಸಾವಿರ, ಜೂನ್‌ 10 ರಂದು 5001 ರಿಂದ 10 ಸಾವಿರ, ಜೂನ್‌ 11 ರಂದು 10,001 ರಿಂದ 20 ಸಾವಿರ, ಜೂನ್‌ 12 ರಿಂದ 20,001 ರಿಂದ 30 ಸಾವಿರ, ಜೂನ್‌ 13 ರಂದು 30,001 ರಿಂದ 45 ಸಾವಿರ, ಜೂನ್‌ 14 ರಂದು 45,001 ರಿಂದ 65 ಸಾವಿರ, ಜೂನ್‌ 14 ರಂದು 45,001 ರಿಂದ 65 ಸಾವಿರ, ಜೂನ್‌ 15 ರಂದು 65,001 ರಿಂದ 85 ಸಾವಿರ, ಜೂನ್‌ 17 ರಂದು 85,001 ರಿಂದ 1.05 ಲಕ್ಷ, ಜೂನ್‌ 18 ರಂದು 1,5,001 ರಿಂದ 1.25 ಲಕ್ಷದವರೆಗೆ ಹಾಗೂ ಜೂನ್‌ 19 ರಂದು 1,25001 ರಿಂದ ಕೊನೆಯ ರ‍್ಯಾಂಕಿಂಗ್‌ವರೆಗಿನ ವಿದ್ಯಾರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಬಹುದು.

ಸಲ್ಲಿಸಬೇಕಾದ ದಾಖಲೆಗಳು: ದಾಖಲೆಗಳ ಪರಿಶೀಲನೆಗೆ ಬರುವ ವಿದ್ಯಾರ್ಥಿಗಳು ಮೂಲ ದಾಖಲೆಗಳ ಒಂದು ಸೆಟ್‌ ಮತ್ತು ಅಟೆಸ್ಟೆಡ್‌ ಮಾಡಿಸಿರುವ ನೆರಳಚ್ಚು ಪ್ರತಿಯ ಒಂದು ಸೆಟ್‌ನ್ನು ಕ್ರಮಾನುಸಾರ ಜೋಡಿಸಿ ಒದಗಿಸಬೇಕು.

ಸಿಇಟಿ–2019 ಅರ್ಜಿ ನಮೂನೆ, ಸಿಇಟಿ–2019 ಅರ್ಜಿ ಶುಲ್ಕ ಪಾವತಿಸಿರುವ ಮೂಲ ಚಲನ್‌, ಸಿಇಟಿ–2019 ಪ್ರವೇಶ ಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ದ್ವಿತೀಯ ವರ್ಷದ ಅಂಕಪಟ್ಟಿ, ಬಿಇಒ/ಡಿಡಿಪಿಐ ಸಹಿ ಮಾಡಿಸುವ ಸ್ಟಡಿ ಸರ್ಟಿಫಿಕೇಟ್‌, ಎರಡು ಇತ್ತೀಚಿನ ಭಾವಚಿತ್ರಗಳನ್ನು ಒದಗಿಸಬೇಕು. ಇದಾದ ನಂತರ ವಿವಿಧ ಮೀಸಲಾತಿ ಕೋರುವ ಪ್ರಮಾಣಪತ್ರಗಳನ್ನು ಲಗತ್ತಿಸಿರಬೇಕು. ಹೆಚ್ಚಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಿರುವ ಮಾಹಿತಿ ಪತ್ರದಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.