ADVERTISEMENT

ರಾಯಚೂರು: ವಿಭಿನ್ನ ಬೋಧನೆಯಿಂದಾಗಿ ಸಾಧನೆ

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಚಂದ್ರು ವೈ.ಎ.

ನಾಗರಾಜ ಚಿನಗುಂಡಿ
Published 3 ಸೆಪ್ಟೆಂಬರ್ 2021, 14:11 IST
Last Updated 3 ಸೆಪ್ಟೆಂಬರ್ 2021, 14:11 IST
ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮಾಹಿತಿಪೂರ್ಣ ಮರಗಳು
ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮಾಹಿತಿಪೂರ್ಣ ಮರಗಳು   

ರಾಯಚೂರು: ‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಮುಖ್ಯ. ಇದಕ್ಕಾಗಿ ಶಾಲಾ ಆವರಣದಲ್ಲಿ ಕಾಣಿಸುವ ಪ್ರತಿಯೊಂದು ವಸ್ತುವಿನ ಮೇಲೆಯೂ ವಿಜ್ಞಾನ ಮಾಹಿತಿ ಅಳವಡಿಸುವ ಕೆಲಸ ಮಾಡಿದೆ. ಮರಗಳನ್ನು, ಶಾಲಾ ಕಟ್ಟಡವನ್ನು ಪಠ್ಯದ ಭಾಗವಾಗಿ ಬಳಸಿಕೊಂಡು ವಿಭಿನ್ನವಾಗಿ ಬೋಧಿಸುತ್ತಿರುವುದರಿಂದ ಸ್ವಲ್ಪಮಟ್ಟದಲ್ಲಿ ನಾನು ಸಾಧನೆ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾರೆ ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಚಂದ್ರ ವೈ.ಎ. ಅವರು.

2021–22ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಾಗೂ ಶಾಲೆಯ ವಿಶೇಷತೆಯನ್ನು ಹಂಚಿಕೊಂಡರು.

‘ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ನಾನು ಈಗಲೂ ಸಾಕಷ್ಟು ವಿಷಯಗಳನ್ನು ಕಲಿತು, ಮಕ್ಕಳಿಗೆ ಅದನ್ನು ಹೇಗೆ ತಿಳಿಸಿಕೊಡಬೇಕು ಎಂದು ಯೋಚಿಸುತ್ತೇನೆ. ಸರಳವಾಗಿ ಅರ್ಥ ಮಾಡಿಸುವುದಕ್ಕೆ ಸಾಕಷ್ಟು ಪೂರ್ವಯೋಜನೆ ಮಾಡುತ್ತೇನೆ. ಇದಕ್ಕಾಗಿ ಶಾಲಾ ಆವರಣದಲ್ಲಿರುವ ಪ್ರತಿಯೊಂದು ಮರಕ್ಕೂ ವಿಜ್ಞಾನಿಗಳ ಮಾಹಿತಿ ಫಲಕವನ್ನು ಅಳವಡಿಸಲಾಗಿದೆ’ ಎಂದರು.

ADVERTISEMENT

‘ವಿಜ್ಞಾನಿಗಳ ಬಗ್ಗೆ ಮತ್ತು ಮರದ ಬಗ್ಗೆ ವೈಜ್ಞಾನಿಕ ಮಾಹಿತಿ ಎಲ್ಲವನ್ನು ಫಲಕದಲ್ಲಿ ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಹಸಿರಿನಿಂದ ಕಂಗೊಳಿಸುವ ಶಾಲಾ ಆವರಣದ ಪ್ರತಿ ಗಿಡಕ್ಕೂ ಕ್ಯೂಆರ್‌ ಕೋಡ್‌ ಕೂಡಾ ನೀಡಲಾಗಿದೆ. ವಿಜ್ಞಾನಿಗಳ ಭಾವಚಿತ್ರಕ್ಕೂ ಕ್ಯೂಆರ್‌ ಕೋಡ್‌ ಇದೆ. ಆಸಕ್ತಿ ಇರುವ ವಿದ್ಯಾರ್ಥಿಗಳು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿಕೊಂಡು ತಿಳಿದುಕೊಳ್ಳುತ್ತಾರೆ’ ಎಂದು ಹೇಳಿದರು.

‘2018–19ನೇ ಸಾಲಿನಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ. ಶಾಲಾ ಪರಿಸರದಲ್ಲಿ ಸಾಕಷ್ಟು ಮರಗಳನ್ನು ಬೆಳೆಸಿದ್ದರಿಂದ ಎರಡು ಬಾರಿ ‘ಹಸಿರುಶಾಲೆ’ ಪ್ರಶಸ್ತಿಗಳನ್ನು ನೀಡಲಾಗಿದೆ. ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ಶಾಲಾ ಆವರಣದಲ್ಲಿ ವಿಜ್ಞಾನ ಮೇಳ ಹಾಗೂ ಗಣಿತ ಮೇಳ ಆಯೋಜಿಸುತ್ತೇವೆ. ವೈಜ್ಞಾನಿಕ ಮನೋಭಾವ ಮೂಡಿಸುವುದಕ್ಕಾಗಿ ಮಕ್ಕಳ ಮೂಲಕ ಪ್ರಯೋಗ ಮಾಡಿಸಲಾಗುತ್ತಿದೆ. ನಮ್ಮ ಶಾಲೆಯಿಂದ ಸಾಕಷ್ಟು ವಿದ್ಯಾರ್ಥಿಗಳು ವಿಜ್ಞಾನ ರಸಪ್ರಶ್ನೆಯಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.