ADVERTISEMENT

ಮುಂದುವರೆದ ಚನ್ನಬಸವನ ಶೋಧ ಕಾರ್ಯ

ನೀರಿನ ಪ್ರಮಾಣ ಕಡಿಮೆ; ತೆಪ್ಪ ಕಾರ್ಯಾಚರಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 17:05 IST
Last Updated 15 ಅಕ್ಟೋಬರ್ 2020, 17:05 IST
 ಚನ್ನಬಸವನ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ವಿತರಿಸಿದ ಪ್ರತಾಪಗೌಡ ಪಾಟೀಲ
 ಚನ್ನಬಸವನ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ವಿತರಿಸಿದ ಪ್ರತಾಪಗೌಡ ಪಾಟೀಲ   

ಮಸ್ಕಿ: ಇಲ್ಲಿನ ಹಿರೇಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ತೆಪ್ಪಗಳ ಮೂಲಕ ನಡೆಯುತ್ತಿದ್ದ ಚನ್ನಬಸವನ ಶೋಧ ಕಾರ್ಯ ತಾತ್ಕಾಲಿಕ ಸ್ಥಗಿತಗೊಳಿಸಿ, 50 ಜನ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಗುರುವಾರ ಬೆಳಿಗ್ಗೆಯಿಂದಲೇ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ತಹಶೀಲ್ದಾರ್ ಬಲರಾಮ ಕಟ್ಟಿಮನಿ ತಿಳಿಸಿದರು

ಹಳ್ಳದಲ್ಲಿ ನೀರು ಕಡಿಮೆಯಾದರೆ ತೆಪ್ಪಗಳಿಂದ ಕಾರ್ಯಚರಣೆ ನಡೆಸುವುದು ಕಷ್ಟ, ನಾಲ್ಕು ದಿನಳವರೆಗೆ ಮೂರು ತೆಪ್ಪಗಳ ಮೂಲಕ ಶೋಧ ಕಾರ್ಯಚರಣೆ ನಡೆಸಲಾಗಿತ್ತು. ಚನ್ನಬಸವ ಇದುವರೆಗೂ ಪತ್ತೆಯಾಗಲಿಲ್ಲ. ಹಳ್ಳದಲ್ಲಿ ನೀರಿನ ಪ್ರಮಾಣ ಇಳಿಮುಖವಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದ ತೆಪ್ಪಗಳ ಮೂಲಕ ನಡೆಯುತ್ತಿದ್ದ ಕಾರ್ಯಾಚರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದರು.

ತೆಪ್ಪಗಳ ಬದಲಿ ಮಸ್ಕಿ, ಮಾನ್ವಿ ಸಿಂಧನೂರು ಸೇರಿದಂತೆ ಸುತ್ತಮುತ್ತ ಠಾಣೆಗಳ ಪೊಲೀಸರು, ಅರಣ್ಯ ಇಲಾಖೆ ಹಾಗೂ ಆಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು 5 ತಂಡಗಳನ್ನಾಗಿ ವಿಭಾಗಿಸಿ ಚನ್ನಬಸವನ ಶೋಧ ಕಾರ್ಯದಲ್ಲಿ ತೊಡಗಿಸಲಾಗಿದೆ. ಎಲ್ಲರೂ ತಂಡಗಳ ರೀತಿಯಲ್ಲಿ ಹಳ್ಳದ ದಡ, ಗಿಡಗಳ ಬಳಿ ಹುಡುಕಾಟ ನಡೆಸಿದ್ದಾರೆ. ಕೆಲವೆಡೆ ಜಾಲಿಗಿಡ, ಪೊದೆಗಳ ಹೆಚ್ಚು ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ತಹಶೀಲ್ದಾರ್‌ ಬಲರಾಮ ಕಟ್ಟಿಮನಿ ತಿಳಿಸಿದರು.

ADVERTISEMENT

ಸರ್ಕಲ್ ಇನ್ ಸ್ಪೆಕ್ಟರ್ ದೀಪಕ್ ಬಿ. ಬೂಸರೆಡ್ಡಿ ಮಾತನಾಡಿ, ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಪೊಲೀಸರು ಸೇರಿದಂತೆ ಈಗಾಗಲೇ 50 ಕ್ಕೂ ಹೆಚ್ಚು ಜನ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದರು.

ಸಬ್ ಇನ್‌ಸ್ಪೆಕ್ಟರ್ ಸಣ್ಣ ವೀರೇಶ ಇತರರು ಇದ್ದರು.

₹ 1 ಲಕ್ಷ ಪರಿಹಾರ
ಮಸ್ಕಿ ಹಳ್ಳದ ಪ್ರವಾಹದಲ್ಲಿ ಭಾನುವಾರ ಕೊಚ್ಚಿಕೊಂಡು ಹೋಗಿದ್ದ ಚನ್ನಬಸವನ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಲಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಗುರುವಾರ ಬಿಜೆಪಿ ಮುಖಂಡರ ಜೊತೆ ಚನ್ನಬಸವನ ಮನೆಗೆ ಭೇಟಿ ನೀಡಿ ಆತನ ಪತ್ನಿ ನೇತ್ರಮ್ಮ ಅವರಿಗೆ ₹ 1 ಲಕ್ಷ ಪರಿಹಾರ ವಿತರಿಸಿ ಸುದ್ದಿಗಾರರ ಜೊತೆ ಮಾತನಾಡಿದರು.

‘ಚನ್ನಬಸವನನ್ನು ಉಳಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡಿದ್ದರು, ಆದರೂ ಫಲಕಾರಿಯಾಗಲಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಜೊತೆ ಮಾತನಾಡಲಾಗಿದೆ. ಸರ್ಕಾರದಿಂದಲ್ಲೂ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಬಿಜೆಪಿ ಮುಖಂಡ ಮಹಾದೇವಪ್ಪಗೌಡ ಪಾಟೀಲ್, ಅಂದಾನಪ್ಪ ಗುಂಡಳ್ಳಿ, ಬಸವಂತರಾಯ ಕುರಿ, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಮಡಿವಾಳ ಸಮಾಜದ ಮುಖಂಡ ತಿರುಪತಿ, ಪಂಪಣ್ಣ ಮಡಿವಾಳ ಸೇರಿದಂತೆ ಅನೇಕ ಮುಖಂಡರು, ಪಕ್ಷದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.