ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ನಿರ್ಮಿಸಿದ್ದ ಆಸರೆ ಮನೆಗಳು
ಮಾನ್ವಿ: ಎರಡ್ಮೂರು ದಿನಗಳಿಂದ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಹತ್ತಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರತಿ ವರ್ಷದಂತೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
2009ರಲ್ಲಿ ಭೀಕರ ನೆರೆಹಾವಳಿ ಸಂಭವಿಸಿದ್ದಾಗ ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ 9 ನೆರೆಪೀಡಿತ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದವು. ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗ್ರಾಮಗಳ ಹೊರವಲಯಗಳಲ್ಲಿ ಜಮೀನುಗಳನ್ನು ಖರೀದಿಸಿ ಸುಸಜ್ಜಿತ ಆಸರೆ ಮನೆಗಳನ್ನು ನಿರ್ಮಿಸಿ ಗ್ರಾಮಗಳನ್ನು ಸ್ಥಳಾಂತರಿಸಲಾಗಿತ್ತು. ಈ ಆಸರೆ ಮನೆಗಳ ಕಾಲೊನಿಯಲ್ಲಿ ಶಾಲೆ, ಅಂಗನವಾಡಿ ಕೇಂದ್ರ, ರಸ್ತೆ, ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿತ್ತು. ಆದರೆ, ಚೀಕಲಪರ್ವಿ ಗ್ರಾಮದ ಸ್ಥಳಾಂತರಕ್ಕಾಗಿ ನಿರ್ಮಿಸಲಾಗಿದ್ದ 554 ಆಸರೆ ಮನೆಗಳು ಇದುವರೆಗೂ ಗ್ರಾಮಸ್ಥರಿಗೆ ಹಂಚಿಕೆಯಾಗಿಲ್ಲ. ಗ್ರಾಮದಲ್ಲಿನ ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಮನೆಗಳ ನಿರ್ಮಾಣ ಮಾಡದಿರುವುದು ಹಂಚಿಕೆಯ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ದೇವಿಪುರ ಗ್ರಾಮದಲ್ಲಿ ನಿರ್ಮಿಸಲಾಗಿದ್ದ 138 ಆಸರೆ ಮನೆಗಳ ಹಕ್ಕುಪತ್ರಗಳನ್ನು ಗ್ರಾಮಸ್ಥರಿಗೆ ನೀಡಲಾಗಿದೆ. ಆದರೆ, ಈ ಗ್ರಾಮದ ಮುಖ್ಯ ರಸ್ತೆಯಿಂದ ಆಸರೆ ಮನೆಗಳ ಕಾಲೊನಿಗೆ ಸಂಪರ್ಕ ರಸ್ತೆ ನಿರ್ಮಿಸದ ಕಾರಣ ಗ್ರಾಮಸ್ಥರು ಸ್ಥಳಾಂತರಕ್ಕೆ ನಿರಾಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಎರಡು ಗ್ರಾಮಗಳಲ್ಲಿ ನಿರ್ಮಾಣಗೊಂಡ ಆಸರೆ ಮನೆಗಳು ಹದಿನೈದು ವರ್ಷಗಳಿಂದ ಪಾಳುಬಿದ್ದಿವೆ. ಕೆಲವು ಮನೆಗಳ ಬಾಗಿಲು, ಕಿಟಕಿಗಳನ್ನು ಒಡೆಯಲಾಗಿದೆ. ಕುಡಿಯುವ ನೀರಿನ ಟ್ಯಾಂಕ್‌ಗೆ ಅಳವಡಿಸಿದ್ದ ಪೈಪ್‌ಗಳನ್ನು ಕಿತ್ತು ಹಾಕಲಾಗಿದೆ. ಇನ್ನೂ ಕೆಲವು ಮನೆಗಳು ಶಿಥಿಲಗೊಂಡು ನೆಲಸಮಗೊಂಡಿವೆ.
2014ರಲ್ಲಿ ರಾಯಚೂರು ಉಪವಿಭಾಗಾಧಿಕಾರಿಯಾಗಿದ್ದ ಮಂಜುಶ್ರೀ ಎನ್. ಚೀಕಲಪರ್ವಿ ಗ್ರಾಮಕ್ಕೆ ಭೇಟಿ ನೀಡಿ, ಆಸರೆ ಮನೆಗಳ ಹಂಚಿಕೆ ಬಗ್ಗೆ ಸಭೆ ನಡೆಸಿ ಗ್ರಾಮಸ್ಥರ ಮನವೊಲಿಸಿದ್ದರು. ಆದರೆ ನಂತರ ವರ್ಗವಾಗಿ ಬಂದ ಸ್ಥಳೀಯ ತಹಶೀಲ್ದಾರರು ಮನೆಗಳ ಹಂಚಿಕೆ ಪ್ರಕ್ರಿಯೆ ಕಾರ್ಯಗತಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ದೇವಿಪುರ ಗ್ರಾಮದ ಆಸರೆ ಮನೆಗಳ ಕಾಲೊನಿಗೆ ಸಂಪರ್ಕ ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇದುವರೆಗೂ ಒಮ್ಮೆಯೂ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಪ್ರತಿ ವರ್ಷ ನೆರೆಹಾವಳಿ, ಬೆಳೆ ಹಾನಿ
ತುಂಗಭದ್ರಾ ಜಲಾಶಯದಿಂದ ಪ್ರತಿ ವರ್ಷ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಂದರೆ ಸಾಕು ನದಿಪಾತ್ರದ ಗ್ರಾಮಗಳು ಹಾಗೂ ಜಮೀನುಗಳು ಜಲಾವೃತಗೊಳ್ಳುತ್ತವೆ. ಕೃಷಿ ಪಂಪ್‌ಸೆಟ್‌ಗಳು ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಭತ್ತ ಇತರ ಬೆಳೆಗಳು ಹಾನಿಗೀಡಾಗಿ ರೈತರು ಸಂಕಷ್ಟ ಎದುರಿಸುತ್ತಾರೆ. ಕೃಷಿಯನ್ನೇ ನೆಚ್ಚಿಕೊಂಡಿರುವ ನದಿ ದಡದ ಜಮೀನುಗಳ ರೈತರಿಗೆ ಪರ್ಯಾಯ ವ್ಯವಸ್ಥೆ ಇಲ್ಲದಾಗಿದೆ.
ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಆಂಧ್ರಪ್ರದೇಶ ಸರ್ಕಾರ ವಿರೋಧ
ಕಳೆದ ವರ್ಷ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ₹ 397.50 ಕೋಟಿ ವೆಚ್ಚದಲ್ಲಿ ಚೀಕಲಪರ್ವಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸೇತುವೆ ನಿರ್ಮಾಣದ ಮೂಲಕ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವುದು ಮತ್ತು ನದಿಪಾತ್ರದಲ್ಲಿರುವ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗ್ರಾಮಗಳಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಆಂಧ್ರಪ್ರದೇಶ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ರಾಜ್ಯ ಸರ್ಕಾರ ಸದ್ಯಕ್ಕೆ ಸ್ಥಗಿತಗೊಳಿಸಿದೆ.
ವಿಜಯದಾಸರ ಜನ್ಮ ಸ್ಥಳ ಚೀಕಲಪರ್ವಿ
ತುಂಗಭದ್ರಾ ನದಿ ದಡದಲ್ಲಿರುವ ಚೀಕಲಪರ್ವಿ ಗ್ರಾಮ ದಾಸ ಸಾಹಿತ್ಯ ರಚನೆಯ ಹರಿದಾಸರಲ್ಲಿ ಒಬ್ಬರಾದ ವಿಜಯದಾಸರ ಜನ್ಮಸ್ಥಳ. ವಿಜಯದಾಸರು ಜನಿಸಿದ ಮನೆ, ವಿಜಯದಾಸರ ಕಟ್ಟೆ, ಶ್ರೀಪಾದರಾಜರು ಪ್ರತಿಷ್ಠಾಪಿಸಿದ್ದ ಲಕ್ಷ್ಮಿ ನರಸಿಂಹ ದೇವಸ್ಥಾನ, ಪುರಾತನ ರುದ್ರಮುನೀಶ್ವರ ಮಠ ಇರುವ ಚೀಕಲಪರ್ವಿ ಪ್ರಮುಖ ಯಾತ್ರಾಸ್ಥಳವಾಗಿದೆ. ಪ್ರತಿ ವರ್ಷ ರಾಜ್ಯ ಹಾಗೂ ಹೊರ ರಾಜ್ಯಗಳ ಅಸಂಖ್ಯಾತ ಭಕ್ತರು ಈ ಧಾರ್ಮಿಕ ಕೇಂದ್ರಗಳಿಗೆ ಆಗಮಿಸುತ್ತಾರೆ.
‘ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ’
ಚೀಕಲಪರ್ವಿ ಗ್ರಾಮದಲ್ಲಿ ಆಸರೆ ಮನೆಗಳ ಹಂಚಿಕೆ ಹಾಗೂ ದೇವಿಪುರ ಗ್ರಾಮದ ಆಸರೆ ಕಾಲೊನಿಗೆ ಸಂಪರ್ಕ ರಸ್ತೆ ಕಲ್ಪಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆಗೆ ಶೀಘ್ರ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
– ಭೀಮರಾಯ ರಾಮಸಮುದ್ರ, ಮಾನ್ವಿ ತಹಶೀಲ್ದಾರ್
ನೆರೆ ಹಾವಳಿಯಿಂದ ಪ್ರತಿ ವರ್ಷ ಬೆಳೆ ಹಾನಿ ಅನುಭವಿಸುವ ಚೀಕಲಪರ್ವಿ ಗ್ರಾಮದ ರೈತರ ನೆರವಿಗೆ ಅಧಿಕಾರಿಗಳು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು– ರುದ್ರಗೌಡ, ಚೀಕಲಪರ್ವಿ ಗ್ರಾಮಸ್ಥ
ಆಸರೆ ಕಾಲೊನಿಗೆ ಸಂಪರ್ಕ ರಸ್ತೆ ಕಲ್ಪಿಸುವ ಕುರಿತು ಹದಿನೈದು ವರ್ಷಗಳಿಂದ ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ನಿರ್ಲಕ್ಷ್ಯ ಮುಂದುವರಿದರೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸುತ್ತೇವೆ– ದೇವರಾಜ ನಾಯಕ, ದೇವಿಪುರ ಗ್ರಾಮಸ್ಥ
ಚೀಕಲಪರ್ವಿ, ದೇವಿಪುರ ಗ್ರಾಮಗಳಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿದ್ದ ಆಸರೆ ಮನೆಗಳು ಪಾಳು ಬಿದ್ದಿವೆ. ಈ ಆಸರೆ ಕಾಲೊನಿಗಳಲ್ಲಿ ಮನೆಗಳ ದುರಸ್ತಿ, ರಸ್ತೆ, ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಜನರಿಗೆ ಹಂಚಿಕೆ ಮಾಡಬೇಕು– ಹನುಮಂತಪ್ಪ ನಾಯಕ ವಕೀಲ, ದೇವಿಪುರ
ನೆರೆಪೀಡಿತ ಗ್ರಾಮಗಳ ಸ್ಥಳಾಂತರಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಆಸರೆ ಮನೆಗಳನ್ನು ಗ್ರಾಮಸ್ಥರಿಗೆ ಹಂಚಿಕೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು..– ನರಸಪ್ಪ ಜೂಕೂರು, ಸಾಮಾಜಿಕ ಕಾರ್ಯಕರ್ತ, ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.