ADVERTISEMENT

ಶಾಲಾ ಕೋಣೆ ಹೊರಗೆ ಮಕ್ಕಳಿಗೆ ಪಾಠ

ಮಂಡಲಗೇರಾ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೋಣೆಗಳ ಕೊರತೆ

ನಾಗರಾಜ ಚಿನಗುಂಡಿ
Published 20 ನವೆಂಬರ್ 2019, 16:45 IST
Last Updated 20 ನವೆಂಬರ್ 2019, 16:45 IST
ರಾಯಚೂರು ತಾಲ್ಲೂಕಿನ ಮಂಡಲಗೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾ ಕೋಣೆಯ ಹೊರಗಡೆ ಪಾಠ ಹೇಳುತ್ತಿರುವುದು
ರಾಯಚೂರು ತಾಲ್ಲೂಕಿನ ಮಂಡಲಗೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾ ಕೋಣೆಯ ಹೊರಗಡೆ ಪಾಠ ಹೇಳುತ್ತಿರುವುದು   

ರಾಯಚೂರು: ತಾಲ್ಲೂಕಿನ ಗಡಿಗ್ರಾಮ ಮಂಡಲಗೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬರುವ ಮಕ್ಕಳೆಲ್ಲ ಶಾಲಾಕೋಣೆಯೊಳಗೆ ಕುಳಿತುಕೊಳ್ಳುವ ಭಾಗ್ಯವಿಲ್ಲ!

ಕಿಷ್ಕಿಂಧೆ ಆಕಾರದ ಮೂರು ಶಾಲಾ ಕೋಣೆಗಳನ್ನು ನಿರ್ಮಿಸಿ ಹಲವು ವರ್ಷಗಳಾಗಿವೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಹಾಜರಾತಿ ಸಂಖ್ಯೆ ಏರಿಕೆಯಾಗುತ್ತಾ ಬಂದಿದ್ದರೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೋಣೆಗಳನ್ನು ನಿರ್ಮಿಸಿಲ್ಲ. ಎರಡು ವರ್ಷಗಳಿಂದ ಮಕ್ಕಳು ಶಾಲಾ ಕೋಣೆಯ ಹೊರಗಡೆ ಕುಳಿತು ಪಾಠ ಕೇಳುತ್ತಿದ್ದಾರೆ.

ನೂತನ ಶಾಲಾ ಕೋಣೆಗಳನ್ನು ನಿರ್ಮಾಣ ಮಾಡುವಂತೆ ಗ್ರಾಮದ ಮುಖಂಡರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಶಾಲಾ ಕೋಣೆಗಳ ನಿರ್ಮಾಣಕ್ಕೆ ಬೇಕಾಗುವ ನಿವೇಶನದ ತೊಂದರೆ ಇದೆ ಎನ್ನುವ ಕಾರಣವನ್ನು ಶಾಲೆಯ ಶಿಕ್ಷಕರು ಹೇಳುತ್ತಿದ್ದಾರೆ. ತಕರಾರಿನ ಬಗ್ಗೆ ಚರ್ಚಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಹಾರ ಕಲ್ಪಿಸಬೇಕು. ಕೂಡಲೇ ಶಾಲಾಕೋಣೆಗಳನ್ನು ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಗ್ರಾಮದ ಯುವಕರ ಒತ್ತಾಯ.

ADVERTISEMENT

ಗಡಿಭಾಗದ ಗ್ರಾಮಗಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಇಲ್ಲ. ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ಬದಲಾಗಿ ಕೂಲಿ ಕೆಲಸ ಕಳುಹಿಸುವ ಪಾಲಕರಿದ್ದಾರೆ. ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಾಗಿದೆ. ಸುಸಜ್ಜಿತ ಸರ್ಕಾರಿ ಶಾಲೆಗಳನ್ನು ನಿರ್ಮಿಸಿ, ಶಿಕ್ಷಣ ಪಡೆಯುವುದಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಕಳಕಳಿ ಕೆಲವರದ್ದು.

‘ಶಾಲಾ ಕೋಣೆ ನಿರ್ಮಾಣ ಮಾಡಿಸುವಂತೆ ಈ ಹಿಂದೆ ಇದ್ದ ಶಾಲಾ ಮುಖ್ಯಗುರುಗಳು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ನಾನು ಕೂಡಾ ಪಂಚಾಯಿತಿಗೆ ಮನವಿ ಕೊಟ್ಟಿದ್ದೇನೆ. ಎರಡು ವರ್ಷಗಳಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಏರಿಕೆಯಾಗಿದೆ. 1 ರಿಂದ 5 ನೇ ತರಗತಿವರೆಗೂ ವರ್ಗಗಳಿವೆ. ಸಂಪೂರ್ಣ ಹಾಜರಾತಿ ಇದ್ದಾಗ ಮಾತ್ರ ಕೋಣೆಯಲ್ಲಿ ಜಾಗ ಸಾಕಾಗುವುದಿಲ್ಲ. ಈ ಕಾರಣದಿಂದ ಕೆಲವು ದಿನಗಳ ಮಟ್ಟಿಗೆ ಹೊರಗಡೆ ಪಾಠದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಶಾಲೆಯ ಮುಖ್ಯಗುರು ಲಕ್ಷ್ಮಣಸಿಂಗ್‌ ಅವರು ಹೇಳುವ ಮಾತಿದು.

‘ಶಾಲಾ ಕೋಣೆಗಳ ಕೊರತೆ ಸಮಸ್ಯೆ ಈಗ ತಾಲ್ಲೂಕು ಆಡಳಿತದ ಗಮನಕ್ಕೆ ಬಂದಿದೆ. ಶೀಘ್ರ ಕೋಣೆಗಳನ್ನು ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ತೊಂದರೆ ಆಗುವುದಿಲ್ಲ’ ಎಂದು ಆಶಾಭಾವ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.