ADVERTISEMENT

ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಜಯಶ್ರೀ ಚನ್ನಾಳ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 12:03 IST
Last Updated 25 ಫೆಬ್ರುವರಿ 2021, 12:03 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿ ಕುರಿತು ಗುರುವಾರ ನಡೆದ ಜಿಲ್ಲಾಮಟ್ಟದ ಎಲ್ಲಾ ಭಾಗಿದಾರರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಜಯಶ್ರೀ ಚನ್ನಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿ ಕುರಿತು ಗುರುವಾರ ನಡೆದ ಜಿಲ್ಲಾಮಟ್ಟದ ಎಲ್ಲಾ ಭಾಗಿದಾರರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಜಯಶ್ರೀ ಚನ್ನಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು   

ರಾಯಚೂರು: ಮಕ್ಕಳ ಹಕ್ಕುಗಳ ಸಮಿತಿಯ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಜಯಶ್ರೀ ಚನ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲನ್ಯಾಯ ಕಾಯ್ದೆ-2015 ಹಾಗೂ ಆರ್.ಟಿ.ಇ ಮಕ್ಕಳ ಸಹಾಯವಾಣಿ ಕುರಿತು ಗುರುವಾರ ನಡೆದ ಜಿಲ್ಲಾಮಟ್ಟದ ಎಲ್ಲ ಭಾಗಿದಾರರ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯನ್ನು ಈ ವರ್ಷ ಬಾಲ್ಯ ವಿವಾಹಮುಕ್ತ ಹಾಗೂ ಮಕ್ಕಳ ಅಪೌಷ್ಟಿಕ ಪ್ರಕರಣ ಮುಕ್ತವಾಗಿ ಮಾಡಲು ಪಣ ತೊಡಲಾಗಿದೆ. ಅಧಿಕಾರಿಗಳೆಲ್ಲರೂ ಒಟ್ಟಾಗಿ ಅದನ್ನು ಯಶಸ್ವಿಗೊಳಿಸಬೇಕು.ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಪೂರ್ಣ ತಡೆಗೆ ಮಕ್ಕಳ ರಕ್ಷಣಾ ಸಮಿತಿ ವಿಫಲವಾಗಿದೆ. ಸಮಿತಿಯಲ್ಲಿರುವ ಶಿಕ್ಷಣ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳ ಕಾರ್ಯಗಳಲ್ಲಿ ಸಮನ್ವಯತೆ ಕೊರತೆಯಾಗುತ್ತಿದೆ. ಪರಸ್ಪರ ಒಬ್ಬರಿಗೊಬ್ಬರು ನೆಪಹೇಳುತ್ತಿರುವುದು ಸರಿಯಲ್ಲ ಎಂದರು.

ADVERTISEMENT

‘ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 24 ಗಂಟೆಯೊಳಗೆ ಐಫ್ಐಆರ್ ದಾಖಲಿಸಬೇಕು ಎಂಬ ನಿಯಮವಿದ್ದರೂ ಪೊಲೀಸ್ ಇಲಾಖೆ ಹಲವೆಡೆ ಎಫ್ಐಆರ್ ದಾಖಲಿಸುತ್ತಿಲ್ಲ. ಹಲವು ಬಾರಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ನಾನು ಪಿಎಸ್ಐಗೆ ಹೇಳಿ ಪ್ರಕರಣ ದಾಖಲಿಸಿದ್ದೇನೆ. ಬಾಲ್ಯವಿವಾಹ ಪ್ರಕರಣದಲ್ಲಿ ರಕ್ಷಣೆ ಮಾಡಲಾದ ಸಂತ್ರಸ್ತ ಬಾಲಕಿಯನ್ನು ಬಾಲಮಂದಿರದಲ್ಲಿ ಎರಡು ವಾರಗಳ ಕಾಲ ಇರಿಸಿ ತಿಳಿವಳಿಕೆ ನೀಡಬೇಕು’ ಎಂದರು.

ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಪ್ರತಿತಿಂಗಳು ಸಿಡಿಪಿಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತೀವ್ರ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಸರ್ಕಾರ ಈ ಹಿಂದೆಯೇ ಕ್ರಮಕೈಗೊಂಡರೂ ಈವರೆಗೆ ಸುಧಾರಣೆಯಾಗಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ವಿತರಣೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕುಡಿಯುವ ನೀರು, ಶೌಚಾಲಯ, ಆಟದ ಸಲಕರಣೆಗಳು, ಉತ್ತಮ ವಾತಾವರಣವಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಮಗ್ರ ವರದಿ ತಯಾರಿಸಿ ನೀಡಬೇಕು. ಈ ಕುರಿತು ಮಾರ್ಚ್ 25 ರೊಳಗೆ ಸಮಗ್ರ ವರದಿ‌ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ ಮಾತನಾಡಿ, ಬಾಲ್ಯ ವಿವಾಹ ಸಂಪೂರ್ಣ ತಡೆಗೆ ಪೊಲೀಸ್ ಇಲಾಖೆಯ ಅಗತ್ಯ ಸಹಕಾರ ಸಿಗುತ್ತಿಲ್ಲ. ಮಕ್ಕಳ ರಕ್ಷಣಾ ಸಮಿತಿಯಲ್ಲಿ 280 ಜನ ಸದಸ್ಯರಿದ್ದರೂ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಶಿಕ್ಷಣ ಇಲಾಖೆಯ ಅಧಿಕಾರಿ ಇಂದಿರಾ ಅವರು ಮಾತನಾಡಿ, ಬಾಲ್ಯವಿವಾಹ ತಡೆಗೆ ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಒಂದು ವಾರಕ್ಕೂ ಹೆಚ್ಚು ದಿನ ಗೈರಯಹಾಜರಿಯಾದ ವಿದ್ಯಾರ್ಥಿನಿಯರ ಮಾಹಿತಿ ಪಡೆದು ಅವರ ಮನೆಗೆ ಶಿಕ್ಷಕರ ತಂಡ ಭೇಟಿ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಮಕ್ಕಳ ಸಂರಕ್ಷಣೆಗೆ ಇಲಾಖೆ ಬದ್ಧ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್‌. ದುರುಗೇಶ, ಶಿಕ್ಷಣಾಧಿಕಾರಿ ಸುಖದೇವ್, ತಾಲ್ಲೂಕು ಮಟ್ಟದ ಸಿಡಿಪಿಒ, ಶಿಕ್ಷಣ ಇಲಾಖೆ ಅಧಿಕಾರಿಗಳು, ಪೋಲಿಸ್ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.