ADVERTISEMENT

ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯ: ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 4:41 IST
Last Updated 3 ಜೂನ್ 2022, 4:41 IST
ಶಕ್ತಿನಗರ ಸಮೀಪದ ದೇವಸೂಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯನ್ನು ಗ್ರಾ.ಪಂ ಅಧ್ಯಕ್ಷ ಸೂಗೂರೇಶ್ ದೊಡ್ಡಿ ಉದ್ಘಾಟಿಸಿದರು
ಶಕ್ತಿನಗರ ಸಮೀಪದ ದೇವಸೂಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯನ್ನು ಗ್ರಾ.ಪಂ ಅಧ್ಯಕ್ಷ ಸೂಗೂರೇಶ್ ದೊಡ್ಡಿ ಉದ್ಘಾಟಿಸಿದರು   

ಶಕ್ತಿನಗರ: ದೇವಸೂಗೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಯಿತು.

ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಸುರೇಶ್ ಕುಮಾರ್ ಮಾತನಾಡಿ, ಶಾಲೆಗಳಿಗೆ ಗ್ರಾಮ ಪಂಚಾಯಿತಿಮೂಲಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಕೋರಿದರು.

ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಎಸ್.ಜಿ. ಕಣ್ಣೂರ್ ಮಾತನಾಡಿ, ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕತೆಯಿಂದ ಒದಗಿಸುವುದಾಗಿ ಭರವಸೆ ನೀಡಿದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕಿ ಶೋಭಾ, ಮಕ್ಕಳ ಹಕ್ಕು ಮತ್ತು ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.

ಗ್ರಾ.ಪಂ ಅಧ್ಯಕ್ಷ ಸೂಗೂರೇಶ ದೊಡ್ಡಿ, ಉಪಾಧ್ಯಕ್ಷೆ ಮಹಾದೇವಿ ದೇಸಾಯಿ, ಲೆಕ್ಕಾಧಿಕಾರಿ ಉದಯ ಕುಮಾರ್, ಸದಸ್ಯರು, ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.ಶಿಕ್ಷಕಿ ಮಂಜುಳ ಹಿರೇಮಠ ನಿರೂಪಿಸಿದರು, ಶಿಕ್ಷಕ ವೀರಭದ್ರಪ್ಪ ವಂದಿಸಿದರು.

‘ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ’

ಮುದಗಲ್: ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡುವುದಾಗಿ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಹೇಳಿದರು.

ಸಮೀಪದ ಉಪ್ಪಾರ ನಂದಿಹಾಳ ಗ್ರಾಮದಲ್ಲಿ ನಡೆದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ವ್ಯವಸ್ಥೆ, ಕಾಂಪೌಂಡ್, ಬಿಸಿಯೂಟದ ಕೊಠಡಿ, ಆಟದ ಮೈದಾನ, ಶೌಚಾಲಯದಂತಹ ಸೌಕರ್ಯ ಒದಗಿಸಲಾಗುವುದು ಎಂದರು. ಗ್ರಾ.ಪಂ ಸದಸ್ಯರಾದ ಲಕ್ಷ್ಮಿಭಾಯಿ ಶಿವರಾಯಪ್ಪ, ರೇಷ್ಮಾ ಭಾನು ಗುಡುಸಾಬ್ ಇದ್ದರು.

ಮೂಲಸೌಕರ್ಯ ಒದಗಿಸಲು ಬದ್ಧ; ಸಿ.ಬಿ ಪಾಟೀಲ
ಮುಷ್ಠೂರು(ದೇವದುರ್ಗ):
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಬದ್ಧ ಎಂದು ಪಿಡಿಒ ಸಿ.ಬಿ ಪಾಟೀಲ ಭರವಸೆ ನೀಡಿದರು.

ಪಂಚಾಯಿತಿ ಆವರಣದಲ್ಲಿ ಪಂಚಾಯತ್ ರಾಜ್ ಇಲಾಖೆ, ಶೃತಿ ಸಂಸ್ಕೃತ ಸಂಸ್ಥೆ ವತಿಯಿಂದ ನಡೆದ ವಿಶೇಷ ಮಕ್ಕಳ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಎಲ್ಲಾ ಶಾಲೆಗಳಲ್ಲಿ ಭೋಜನಾಲಯ, ಅಡುಗೆ ಕೋಣೆ, ಕಾಂಪೌಂಡ್, ಶೌಚಾಲಯ ನಿರ್ಮಿ ಸಲಾಗಿದೆ. ಅಗತ್ಯ ಬಿದ್ದರೇ ಹೆಚ್ಚುವರಿ ಸೌಕರ್ಯ ಕಲ್ಪಿಸಲಾಗುವುದು. ಊಟದ ತಟ್ಟೆ ಹಾಗೂ ಲೋಟಗಳನ್ನು ಶೀಘ್ರವೇ ವಿತರಿಸಲಾಗುವುದು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ತಿಕ್ಕಯ್ಯ ಮಾತನಾಡಿ, ಕೋವಿಡ್ ಕಾರಣಕ್ಕೆ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪಿಎಂ ಕೇರ್ ಅಡಿ ₹10 ಲಕ್ಷ, ರಾಜ್ಯ ಸರ್ಕಾರದ ಪೋಷಣೆ ಅಭಿಯಾನದಡಿ 18 ವರ್ಷದ ವರೆಗೆ ಮಾಸಿಕ ₹3,500 ವಿದ್ಯಾಭ್ಯಾಸದ ಖರ್ಚು ಸಿಗಲಿದೆ ಎಂದು ಹೇಳಿದರು.

ಸಂಸ್ಥೆಯ ತಾಲ್ಲೂಕು ಸಂಯೋಜಕ ರಾಮಣ್ಣ ಎನ್.ಗಣೇಕಲ್, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಸಿಆರ್‌ಪಿ ಶೈಲಜಾ, ಗ್ರಾ.ಪಂ ಅಧ್ಯಕ್ಷೆ ರೇಣುಕಾ, ಮಾಜಿ ಅಧ್ಯಕ್ಷ ಗಂಗಾಧರ ನಾಯಕ, ಅಂಗನವಾಡಿ ಮೇಲ್ವಿಚಾರಕಿ ಶಾಂತಭಾಯಿ, ತಿಮ್ಮನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.