ರಾಯಚೂರು: ತುರ್ತು ಪರಿಸ್ಥಿತಿಯ ಪ್ರತಿಕೂಲ ಸಂದರ್ಭದಲ್ಲಿ ನಾಗರಿಕ ರಕ್ಷಣೆ, ಹಾನಿ ಕಡಿಮೆಗೊಳಿಸುವುದು, ಸಶಸ್ತ್ರ ಪಡೆಗಳ ಕಾರ್ಯದಕ್ಷತೆ ಬಲಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ರಾಯಚೂರು ಜಿಲ್ಲೆಯಲ್ಲಿ ಸಹ ನಾಗರಿಕ ರಕ್ಷಣಾ ಸಿದ್ಧತೆ ಕಾರ್ಯಾಚರಣೆ ಆರಂಭವಾಗಿದೆ.
ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ತುರ್ತು ಸಭೆ ನಡೆಯಿತು.
ನಾಗರಿಕ ರಕ್ಷಣೆ, ನಾಗರಿಕ ರಕ್ಷಣಾ ಯೋಜನೆ, ಸೇನಾ ದಾಳಿ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ನಾಗರಿಕ ರಕ್ಷಣಾ ಕಾಯ್ದೆ-1968, ಭಾರತ ರಕ್ಷಣಾ ಕಾಯ್ದೆ 1962, 1971, ಜಿನೀವಾ ಕನ್ವೆನ್ಶನ್ ಕಾಯ್ದೆ-2010, ನಾಗರಿಕೆ ರಕ್ಷಣೆ ಮತ್ತು ತರಬೇತಿ ಸೇರಿ ಎಲ್ಲ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ತುರ್ತು ಪರಿಸ್ಥಿತಿಯ ಪ್ರತಿಕೂಲ ಸಂದರ್ಭದಲ್ಲಿ ಅಗ್ನಿಶಾಮಕ ಸೇವೆ, ರಕ್ಷಣಾ ಸೇವೆ, ತುರ್ತು ಸೇವೆ, ಕಲ್ಯಾಣ ಸೇವೆ, ಶವ ವಿಲೇವಾರಿ ಕ್ರಮಗಳು, ಸರ್ಕಾರಿ ಸಿಬ್ಬಂದಿ, ವಾರ್ಡನ್ ಮತ್ತು ಸ್ವಯಂ ಸೇವಕರನ್ನು ನೋಂದಾಯಿಸಿ ತರಬೇತಿ ನೀಡುವುದು, ಸಿವಿಲ್ ಡಿಫೆನ್ಸ್ ಕಂಟ್ರೋಲ್ ರೂಮ್‌ಗಳನ್ನು ಹಾಗೂ ಸಿವಿಲ್ ಡಿಫೆನ್ಸ್ ಸೈರನ್‌ಗಳನ್ನು ಕಾರ್ಯಗತಗೊಳಿಸುವುದು ಮತ್ತು ಅಗತ್ಯ ಉಪಕರಣಗಳು ಮತ್ತು ಸರಬರಾಜಿನೊಂದಿಗೆ ನಾಗರಿಕ ರಕ್ಷಣಾ ಮತ್ತು ಸ್ಥಳೀಯ ತುರ್ತು ಸೇವೆಗಳನ್ನು ಸಜ್ಜುಗೊಳಿಸುವುದು, ವಸತಿಗಾಗಿ ಸುರಕ್ಷಿತ ಕಟ್ಟಡ ಮತ್ತು ಸೇನಾರಹಿತ ವಲಯವನ್ನು ಗುರುತಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಮಾಕ್ ಡ್ರಿಲ್ ರೂಪುರೇಷಗಳ ಬಗ್ಗೆ ಸಹ ಸಭೆಯಲ್ಲಿ ಚರ್ಚೆ ನಡೆಯಿತು. ವಾಯುದಾಳಿಯ ಸಂದರ್ಭದಲ್ಲಿ ಸೈರನ್‌ಗಳ ಸಕ್ರಿಯಗೊಳಿಸುವಿಕೆ, ತೆಗೆದುಕೊಳ್ಳಬೇಕಾದ ಕ್ರಮಗಳು, ಯಾವುದೇ ಕಟ್ಟಡದಲ್ಲಿ ಬೆಂಕಿಕಾಣಿಸಿಕೊಂಡಲ್ಲಿ ಪಾರಾಗುವ ಕ್ರಮಗಳು, ಹಾನಿಗೊಳಗಾದ ಕಟ್ಟಡದಿಂದ ಸ್ಥಳಾಂತರ ಕ್ರಮ, ತಾತ್ಕಾಲಿಕ ಆಸ್ಪತ್ರೆಯ ಸ್ಥಾಪನೆ, ಆಕ್ರಮಿತ ಪ್ರದೇಶದಿಂದ ನಾಗರಿಕನ್ನು ಸೇನಾರಹಿತ ವಲಯಗಳಿಗೆ ಸ್ಥಳಾಂತರಿಸುವುದು, ಕಂಟ್ರೋಲ್ ರೂಮ್‌ಗೆ ವರದಿ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಕ್ ಡ್ರಿಲ್ ಸಂದರ್ಭದಲ್ಲಿ ಸರಿಯಾಗಿ ಅಭ್ಯಾಸ ನಡೆಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಾರ್ವಜನಿಕರಲ್ಲಿ ಮನವಿ: ಈ ವೇಳೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ತುರ್ತು ಪರಿಸ್ಥಿತಿಯ ಬಗ್ಗೆ ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಸಭೆಯ ಮೂಲಕ ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.
ಆಯಾ ವಿಧಾನಸಭಾ ಕ್ಷೇತ್ರಗಳ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿದ್ದು ಈ ಬಗ್ಗೆ ವಿಶೇಷ ನಿಗಾವಹಿಸಬೇಕು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು ಎಂದು ತಿಳಿಸಿದರು. ನಾಗರಿಕ ರಕ್ಷಣಾ ಕಾರ್ಯಚರಣೆಗೆ ಸಂಬಂಧಿಸಿದಂತೆ ಸರ್ವ ಪಕ್ಷಗಳ ಮತ್ತು ಎಲ್ಲಾ ಸಂಘಟನೆಗಳ ಸಭೆ ಕರೆದು ಚರ್ಚಿಸಲು ಕ್ರಮ ವಹಿಸಬೇಕು ಎಂದು ಸಚಿವರು ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.
ರಾಯಚೂರಿನ ವೈಟಿಪಿಎಸ್, ಆರ್‌ಟಿಪಿಎಸ್‌ಗಳು, ರಾಸಾಯನಿಕ ಫ್ಯಾಕ್ಟರಿಗಳನ್ನು ಗುರಿಯಾಗಿಸುವ ತಂತ್ರಗಾರಿಕೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ವಿಶೇಷವಾಗಿ ಭದ್ರತಾ ಪಡೆಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ತಾವಿರುವ ಸ್ಥಳದಲ್ಲಿ ಜಾಗೃತರಾಗಿರಬೇಕು. ಅವಶ್ಯಕ ಸಂದರ್ಭದಲ್ಲಿ ಸಹಾಯವಾಗಲು ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ ವಹಿಸಬೇಕು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸುಸಜ್ಜಿತ ವೈದ್ಯಕೀಯ ಸೇವೆ ಇರುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಖ್ಯವಾಗಿ ವಿವಿಧ ಭದ್ರಾತಾ ಪಡೆಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ತರಬೇತಿಯೊಂದಿಗೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಬೇಕು. ಆರೋಗ್ಯ, ಅಗ್ನಿಶಾಮಕ ಮತ್ತು ಇನ್ನಿತರ ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯ ನಡೆಸಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಲ್ಲಿ ಯಾವುದೇ ಬಗೆಯ ತುರ್ತು ಪರಿಸ್ಥಿತಿಯ ಪ್ರತಿಕೂಲ ಸಂದರ್ಭವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಾಕ್‌ಡ್ರಿಲ್ ಮತ್ತು ಇನ್ನಿತರ ವಿಷಯಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಬಸನಗೌಡ ದದ್ದಲ್, ಬಸವರಾಜ ತುರ್ವಿಹಾಳ, ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯರಾದ ಎ. ವಸಂತಕುಮಾರ, ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡ್ವೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಉಪವಿಭಾಗಾಧಿಕಾರಿ ಗಜಾನನ ಬಾಳೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.