ADVERTISEMENT

‘ಭಾವನೆಯಲ್ಲಿ ಭಗವಂತನನ್ನು ಕಾಣುವ ಭಾಗ್ಯ’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 14:30 IST
Last Updated 24 ಅಕ್ಟೋಬರ್ 2020, 14:30 IST
ರಾಯಚೂರು ತಾಲ್ಲೂಕಿನ ಮಮದಾಪುರ ಗ್ರಾಮದೇವತೆ ಗಧಾರ ಮಾರಿಕಾಂಭಾ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ಪಂಡಿತ್‌ ನರಸಿಂಹಲು ವಡವಾಟಿ ಅವರು ಶುಕ್ರವಾರ ಕ್ಲಾರಿಯೋನೆಟ್‌ ವಾದನ ಮಾಡಿದರು 
ರಾಯಚೂರು ತಾಲ್ಲೂಕಿನ ಮಮದಾಪುರ ಗ್ರಾಮದೇವತೆ ಗಧಾರ ಮಾರಿಕಾಂಭಾ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ಪಂಡಿತ್‌ ನರಸಿಂಹಲು ವಡವಾಟಿ ಅವರು ಶುಕ್ರವಾರ ಕ್ಲಾರಿಯೋನೆಟ್‌ ವಾದನ ಮಾಡಿದರು    

ರಾಯಚೂರು: ‘ಭಾವನೆಯಲ್ಲಿ ಭಗವಂತನನ್ನು ಕಾಣುವ ಮಹಾಶಕ್ತಿ ಇದೆ ಹಾಗೂ ಶ್ರೀಂಗೇರಿ ಶಾರದಾಂಭೆಯ ಪ್ರೇರಣೆಯಿಂದ ಮಮದಾಪುರ ಮಾರಿಕಾಂಭಾ ಮಹಾಮಾತೆಯ ಸನ್ನಿಧಿಯಲ್ಲಿ ನನ್ನ ಸಂಗೀತ ಸೇವೆ ಭಾಗ್ಯ ದೊರೆತಿದೆ’ ಎಂದು ಪಂಡಿತ್‌ ನರಸಿಂಹಲು ವಡವಾಟಿ ಹೇಳಿದರು.

ತಾಲ್ಲೂಕಿನ ಮಮದಾಪುರ ಗ್ರಾಮದೇವತೆ ಗಧಾರ ಮಾರಿಕಾಂಭಾ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ದೇವಸ್ಥಾನದ ಸಮಿತಿ ಹಾಗೂ ಗ್ರಾಮದ ಸರ್ವ ಸದ್ಭಕ್ತರ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಲಾರಿಯೋನೆಟ್‌ ಸಂಗೀತ ವಾದನ ಆರಂಭಿಸುವ ಪೂರ್ವ ಮಾತನಾಡಿದರು.

‘ಪ್ರತಿ ವರ್ಷವೂ ಶರನ್ನವರಾತ್ರಿಯಲ್ಲಿ ನನ್ನ ಸಂಗೀತ ಸೇವೆ ಶ್ರೀಂಗೇರಿ ಶಾರದಾಂಭೆಯ ಮಹಾಸನ್ನಿಧಿಯಲ್ಲಿ ಜರುಗುತ್ತಿತ್ತು. ಜಗದ್ಗುರುಗಳು ನನಗೆ ಶ್ರೀಂಗೇರಿ ಮಹಾಪೀಠದ ಸಂಗೀತ ಆಸ್ಥಾನ ವಿಧ್ವಾನ್ ಎಂದು ಆಶೀರ್ವದಿಸಿದ್ದಾರೆ’ ಎಂದು ಹೇಳಿದರು, ‘ಈ ವರ್ಷವೂ ಕೂಡ ಅಲ್ಲಿಗೆ ಹೋಗಲು ತಯಾರಿ ಮಾಡಿಕೊಂಡಾಗ ಜಗದ್ಗುರು ಮಹಾಸನ್ನಿಧಿಯವರು ಕೊರೊನಾ ಮಹಾಮಾರಿಯ ನಿಮಿತ್ತ ಹಾಗೂ ಬಿಟ್ಟುಬಿಡದೇ ಸುರಿಯುತ್ತಿರುವ ಮಹಾಮಳೆಯ ನಡುವೆ ದೂರದಿಂದ ಹಿರಿಯ ಕಲಾವಿದರು ಪ್ರಯಾಣ ಮಾಡುವುದು ಸರಿಯಲ್ಲ ಎಂದು ತಿಳಿಸಿದರು’ ಎಂದರು.

ADVERTISEMENT

‘ಜಗದ್ಗುರುಗಳ ಆಶೀರ್ವಾದದ ಮೇರೆಗೆ ಮಹಾಮಾತೆಯ ಸುಕ್ಷೇತ್ರ ಮಮದಾಪುರ ಗ್ರಾಮಕ್ಕೆ ನನ್ನನ್ನು ಬರಮಾಡಿಕೊಂಡು ನನಗೆ ಸಂಗೀತ ಸೇವೆ ಸಲ್ಲಿಸಲು ಸಕಲ ರೀತಿಯಿಂದಲೂ ಅನುಕೂಲ ಮಾಡಿ ವೇಧಿಕೆಯನ್ನು ಕೊಟ್ಟಿರುವ ಸರ್ವ ಗ್ರಾಮಸ್ಥರಿಗೆ ನಿಮ್ಮ ಭಾವನೆಗಳಲ್ಲಿ ನಾನು ಭಗವಂತನನ್ನು ಕಂಡು ತುಂಬ ಧನ್ಯನಾಗಿದ್ದೇನೆ’ ಎಂದು ಹೇಳಿದರು.

‘ಗ್ರಾಮದ ಗುರು-ಹಿರಿಯರೆಲ್ಲರೂ ಸಂಗೀತದ ಬಗ್ಗೆ ಇಷ್ಟೊಂದು ಆಸಕ್ತಿ ತೋರಿಸುತ್ತಿರುವುದನ್ನು ಕಂಡು ನನಗೆ ತುಂಬ ಸಂತೋಷ ತಂದಿದೆ’ ಎಂದು ತಿಳಿಸಿದರು.

ಆನಂತರ ಒಂದುವರೆ ಗಂಟೆ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ಅವರ ವಚನಗಳನ್ನು ಹಾಡಿದರು. ಒಂದು ಗಂಟೆ ಕ್ಲಾರಿಯೋನೆಟ್ ವಾದನ ಮಾಡಿದರು. ದೇವಸ್ಥಾನದ ಆವರಣದಲ್ಲಿ ನೆರೆದ ಸರ್ವ ಗ್ರಾಮಸ್ಥರನ್ನು ಸಂಗೀತವನ್ನು ಆಲಿಸಿ ಮಂತ್ರಮುಗ್ಧರಾಗಿದ್ದರು.

ಪುತ್ರ ವೆಂಕಟೇಶ ವಡವಾಟಿ ಸಹ ಕ್ಲಾರಿಯೋನೆಟ್‌ ವಾದನ ಮಾಡಿದರು. ಸರಸ್ವತಿ ಎಚ್. ರಾಜಶೇಖರ್‌ ಹಾರ್ಮೋನಿಯಂ, ಸುದರ್ಶನ್ ಅಸ್ಕಿಹಾಳ ಅವರು ತಬಲಾ ಸಾಥ್‌ ನೀಡಿದರು.

ಗಧಾರ್ ಮಾರಿಕಾಂಭಾ ದೇವಸ್ಥಾನದ ಅಧ್ಯಕ್ಷ ಸವಾರೆಪ್ಪ, 70 ಜನ ಶರನ್ನವರಾತ್ರಿ ಮಹಾಮಾತೆಯ ಮಾಲಾಧಾರಿಗಳು, ಸರ್ವ ಗುರು-ಹಿರಿಯರು ಇದ್ದರು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.