ADVERTISEMENT

ರಾಯಚೂರು:ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಶುಚಿತ್ವ

ಕೊರೊನಾ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳ ಜಾರಿಗೆ ಒತ್ತು

ನಾಗರಾಜ ಚಿನಗುಂಡಿ
Published 21 ಮಾರ್ಚ್ 2020, 16:06 IST
Last Updated 21 ಮಾರ್ಚ್ 2020, 16:06 IST
ಬಿ.ಎಚ್‌. ಗೋನಾಳ, ಡಿಡಿಪಿಐ ರಾಯಚೂರು
ಬಿ.ಎಚ್‌. ಗೋನಾಳ, ಡಿಡಿಪಿಐ ರಾಯಚೂರು   

ರಾಯಚೂರು: ಜಿಲ್ಲೆಯ ವಿವಿಧೆಡೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಅಧಿಕಾರಿಗಳು ಪೂರ್ವ ತಯಾರಿ ಕೈಗೊಂಡಿದ್ದು, ಮುಖ್ಯವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸುವ ಪೂರ್ವ ವಿದ್ಯಾರ್ಥಿಗಳು ಕೈ ಶುಚಿತ್ವ ಮಾಡಿಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪರೀಕ್ಷೆ ಪೂರ್ವ ತಯಾರಿ ಕುರಿತು ಚರ್ಚಿಸಿದ್ದಾರೆ. ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಆರೋಗ್ಯ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಕೈ ತೊಳೆಯಲು ಸ್ಯಾನಿಟೈಜರ್‌ ಒದಗಿಸಿ, ಶುಚಿತ್ವ ಕಾಪಾಡಲು ಸೂಚನೆ ನೀಡಲಾಗುತ್ತಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿರುವ ಮೂಲ ಸೌಕರ್ಯಗಳ ಸುಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಕೇಂದ್ರಗಳಿಗೆ ಅಗತ್ಯವಾಗುವ ಪರಿಕರಗಳನ್ನು ಒದಗಿಸುವ ಕುರಿತು ಕ್ರಮ ಕೈಗೊಂಡಿರುವ ಕುರಿತು ‘ಪ್ರಜಾವಾಣಿ’ಗೆ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ, ಸಮುದಾಯ ಆರೋಗ್ಯ ಕೇಂದ್ರದಿಂದ ಅಥವಾ ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲು ಕೋರಲಾಗಿದೆ. ಕೊರೊನಾ ವೈರಸ್‌ ರೋಗ ಹರಡದಂತೆ ಮುಂಜಾಗ್ರತೆ ವಹಿಸುವ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಸ್ಯಾನಿಟೈಜರ್ ಒದಗಿಸಲಾಗುತ್ತಿದೆ.

ಮಾರ್ಚ್‌ 27 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಏಪ್ರಿಲ್‌ 9 ರವರೆಗೂ ನಡೆಯಲಿವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಶೀತ, ಜ್ವರ, ಕೆಮ್ಮು ಕಂಡುಬಂದರೆ, ಅಂಥವರು ಪ್ರತ್ಯೇಕವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಲಭ್ಯವಿರುವ ಟೇಬಲ್‌ ಚೇಯರ್ ಸಂಖ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಒಂದು ಟೇಬಲ್‌ಗೆ ಒಬ್ಬ ವಿದ್ಯಾರ್ಥಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವ ಬಗ್ಗೆಯೂ ಯೋಜಿಸಲಾಗುತ್ತಿದೆ.

ಪರೀಕ್ಷೆ ಬರೆಯುವುದಕ್ಕೆ ಬರುವ ವಿದ್ಯಾರ್ಥಿಗಳು, ಕೊರೊನಾ ಮುನ್ನಚ್ಚರಿಕೆ ಕ್ರಮವಾಗಿ ಮುಖಗವುಸು ಧರಿಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.