ADVERTISEMENT

ಮುದಗಲ್ | ಸ್ವಂತ ಆರೋಗ್ಯದ ಕಾಳಜಿ ಮರೆತ ಸ್ವಚ್ಛತಾ ಸಿಬ್ಬಂದಿ

ಡಾ.ಶರಣಪ್ಪ ಆನೆಹೊಸೂರು
Published 13 ಜುಲೈ 2024, 6:00 IST
Last Updated 13 ಜುಲೈ 2024, 6:00 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ಮುದಗಲ್: ಇಲ್ಲಿನ ಪುರಸಭೆ ವ್ಯಾಪ್ತಿಯ ಸ್ವಚ್ಛತಾ ಜವಾಬ್ದಾರಿ ಹೊತ್ತ ಪೌರಕಾರ್ಮಿಕರು ಕೈಗವಸು, ಮಾಸ್ಕ್‌ ಸೇರಿ ಇನ್ನಿತರ ವಸ್ತುಗಳನ್ನು ಬಳಸದೇ ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ.

ಕಾರ್ಮಿಕರು ಬರಿಗೈ ಹಾಗೂ ಬರಿಗಾಲಿನಲ್ಲಿಯೇ ಕಸ ತೆಗೆಯುವ ಹಾಗೂ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ದೂಳು ಏಳುತ್ತಿದ್ದರೂ ಮಾಸ್ಕ್‌ ಹಾಕಿಕೊಳ್ಳುತ್ತಿಲ್ಲ. ಇದು ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರತಿ ದಿನ ಸ್ವಚ್ಛತೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಉಪಕರಣಗಳನ್ನು ಕಡ್ಡಾಯವಾಗಿ ಬಳಸುವಂತೆ ಹೇಳಬೇಕಾದವರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ADVERTISEMENT

ಹಸಿಕಸ ಸೇರಿದಂತೆ ಎಂತಹದ್ದೇ ದುರ್ನಾತ ಬೀರುವ ಕಸವಿದ್ದರೂ, ಬರಿಗೈಯಲ್ಲೇ ಎತ್ತುತ್ತಾರೆ. ಲಾರಿಗಳಿಗೆ ಕಸ ಹೇರಲು, ಕಸ ಕಟ್ಟಿದ ಚರಂಡಿ ತೆರವುಗೊಳಿಸಲು ಸಲಕರಣೆ ಬಳಸುವುದಿಲ್ಲ. ಕೊಳೆತ ಕಸ ವಾಸನೆ ಬೀರುತ್ತಿದ್ದರೂ, ಮುಖಗವಸು ಬಳಸುವುದಿಲ್ಲ. ಕೈಗವಸು, ಮುಖಗವಸು, ಗಮ್‌ ಶೂ ಮತ್ತಿತರ ಸಲಕರಣೆಗಳ ಉಪಯೋಗಿಸಬೇಕೆಂಬ ನಿಯಮ ಇಲ್ಲಿ ಬರೀ ಕಾಗದಕ್ಕೆ ಸೀಮಿತವಾಗಿದೆ.

ಕೆಲ ಪೌರ ಕಾರ್ಮಿಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದು, ಅವರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಅನೈರ್ಮಲ್ಯದ ವಾತಾವರಣದಲ್ಲಿ ಕೆಲಸ ಮಾಡುವುದರಿಂದ ಪೌರಕಾರ್ಮಿಕರು ದುಶ್ಚಟಗಳಿಗೆ ಒಳಗಾಗಿ ಬಹಳ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಚರ್ಮ, ಕಣ್ಣು, ಉಸಿರಾಟದ ತೊಂದರೆಗಳು ಕಾಡುತ್ತಿವೆ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 35 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಪಟ್ಟಣದಲ್ಲಿ ಜನಸಂಖ್ಯೆ ದಿನವೇ ದಿನಕ್ಕೆ ಹೆಚ್ಚಾಗುತ್ತಿದೆ. ಅದಲ್ಲದೆ ಬಡಾವಣೆಗಳೂ ಹೆಚ್ಚಾಗುತ್ತಿವೆ. ಪಟ್ಟಣ ಸ್ವಚ್ಛತೆ ಕಾಪಾಡುವುದು ಪುರಸಭೆಗೆ ಸವಾಲಾಗಿದೆ. ಕಾರ್ಮಿಕರ ಕೊರತೆಯೂ ಕಾಡುತ್ತಿದೆ.

‘ಪ್ರತಿನಿತ್ಯ ಬೆಳಿಗ್ಗೆ 5.30ಕ್ಕೆ ಬಂದು ಕೆಲಸ ಆರಂಭಿಸಿದರೆ, ಬೆಳಿಗ್ಗೆ 10 ಗಂಟೆಯವರೆಗೂ ಮಾಡಬೇಕು. ಸರ್ಕಾರ ನಮಗೆ ಯಾವ ಸವಲತ್ತುಗಳನ್ನೂ ನೀಡುತ್ತಿಲ್ಲ. ಕೆಲಸದ ಮಧ್ಯೆ ಬಿಡುವಿನ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ವಾರ್ಡ್‌ಗಳಲ್ಲಿ ಸೂಕ್ತ ಸ್ಥಳವೂ ಇಲ್ಲ’ ಎಂಬುದು ಪೌರಕಾರ್ಮಿಕರ ಅಳಲು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ನೈರ್ಮಲ್ಯ ಅಧಿಕಾರಿ ಆರೀಫಾ ಉನ್ನಿಸಾ ಬೇಗಂ, ‘ಪೌರ ಕಾರ್ಮಿಕರಿಗೆ ಕೈಗವಸು, ಮಾಸ್ಕ್‌ ಸೇರಿ ಅನೇಕ ಸಲಕರಣೆಗಳನ್ನು ನೀಡಿದ್ದೇವೆ. ಆದರೆ, ಕೆಲವರು ಮಾತ್ರ ಅವುಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಾರೆ’ ಎಂದರು.

ಪೌರ ಕಾರ್ಮಿಕರ ವಿಶ್ರಾಂತಿಗಾಗಿ ಪುರಸಭೆಯಲ್ಲಿ ಕೊಠಡಿ ನಿರ್ಮಿಸಲಾಗಿದೆ. ಕೈಗವಸು ಹಾಕಿದರೆ ಸಲಕರಣೆ ಜಾರುತ್ತಿವೆ. ಮಾಸ್ಕ್‌ ಹಾಕಿದರೆ ಉಸಿರುಗಟ್ಟಿದಂತಾಗುತ್ತದೆ ಎಂದುಕಾರ್ಮಿಕರು ಹೇಳುತ್ತಿದ್ದಾರೆ.
ರಹಮತ್ ಉನ್ನಿಸಾ ಬೇಗಂ, ನೈರ್ಮಲ್ಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.