ADVERTISEMENT

ಕಾಲೇಜುಗಳು ಆರಂಭ: ಬಾರದ ವಿದ್ಯಾರ್ಥಿಗಳು

ಉಪನ್ಯಾಸಕರು, ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 13:05 IST
Last Updated 17 ನವೆಂಬರ್ 2020, 13:05 IST
ರಾಯಚೂರಿನ ಎಲ್‌ವಿಡಿ ಪದವಿ ಕಾಲೇಜಿಗೆ ಮಂಗಳವಾರ ಹಾಜರಾದ ಬೆರಣಿಕೆಯಷ್ಟು ವಿದ್ಯಾರ್ಥಿಗಳನ್ನು ಉಪನ್ಯಾಸಕರು ಚಪ್ಪಾಳೆ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು
ರಾಯಚೂರಿನ ಎಲ್‌ವಿಡಿ ಪದವಿ ಕಾಲೇಜಿಗೆ ಮಂಗಳವಾರ ಹಾಜರಾದ ಬೆರಣಿಕೆಯಷ್ಟು ವಿದ್ಯಾರ್ಥಿಗಳನ್ನು ಉಪನ್ಯಾಸಕರು ಚಪ್ಪಾಳೆ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು   

ರಾಯಚೂರು: ಕೊರೊನಾ ಸೋಂಕು ತಡೆಗಾಗಿ ಸ್ಥಗಿತಗೊಳಿಸಿದ ಪದವಿ ಕಾಲೇಜುಗಳೆಲ್ಲ ಮಂಗಳವಾರದಿಂದ ತೆರೆದುಕೊಂಡಿವೆ. ಆದರೆ, ಮೊದಲ ದಿನ ಉಪನ್ಯಾಸಕರು ಮತ್ತು ಸಿಬ್ಬಂದಿ ಮಾತ್ರ ಕ್ಯಾಂಪಸ್‌ನಲ್ಲಿದ್ದರು. ವಿದ್ಯಾರ್ಥಿಗಳು ಗೈರುಹಾಜರಿಯಾಗಿದ್ದರು.

ಕೆಲವು ಕಾಲೇಜುಗಳಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಸರ್ಕಾರದ ಮಾರ್ಗ ಸೂಚಿ ಅನ್ವಯ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕಾದರೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ನೀಡಿದರೆ ಮಾತ್ರ ತರಗತಿಗೆ ಹಾಜರಾಗಬಹುದು ಎಂಬ ನಿಯಮವೇ ವಿದ್ಯಾರ್ಥಿಗಳ ಗೈರು ಹಾಜರಾಗಲು ಪ್ರಮುಖ ಕಾರಣವಾಯಿತು.

‘ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ಕಡ್ಡಾಯವಾಗಿಲ್ಲ. ಅವರು ತರಗತಿಗೆ ಹಾಜರಾಗಬೇಕಾದರೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂಬ ನಿಯಮ ರೂಪಿಸಲಾಗಿದೆ. ಈ ಕಾರಣ ಬಹುತೇಕ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ಎಲ್ಲಿ‌ ಮಾಡಿಸಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ, ಇನ್ನೂ ಹಲವರು ಕೋವಿಡ್ ಪರೀಕ್ಷೆ ಮಾಡಿಸಿದರೂ ವರದಿ ಕೈ ಸೇರದ ಕಾರಣ ಕಾಲೇಜಿಗೆ ಬರಲು ಸಾಧ್ಯವಾಗಿಲ್ಲ’ ಎಂದು ಸರ್ಕಾರಿ ಪ್ರಥಮ ಕಾಲೇಜಿನ ಸಿಬ್ಬಂದಿಯೊಬ್ಬರು ಹೇಳಿದರು.

ADVERTISEMENT

ಒಬ್ಬ ವಿದ್ಯಾರ್ಥಿ ಹಾಜರಿ: ನಗರದ ಟ್ಯಾಗೋರ್ ಮೆಮೋರಿಯಲ್ ಪದವಿ ಕಾಲೇಜಿಗೆ ಒಬ್ಬ ವಿದ್ಯಾರ್ಥಿ ಹಾಜರಾಗಿದ್ದ. ಸ್ಯಾನಿಟೈಸರ್, ಬಿಸಿ‌ನೀರು, ಮಾಸ್ಕ್ ,ಗ್ಲೌಸ್, ಇತರೆ ಸ್ವಚ್ಛತೆ ಹಾಗೂ‌ ಮುನ್ನೆಚ್ಚರಿಕಾ ಕ್ರಮ‌ ವಹಿಸಿ ಬೆಳಿಗ್ಗೆ ನಿಗದಿತ ಸಮಯದಲ್ಲಿ ಕಾಲೇಜು ತೆರೆದುಕೊಂಡಿತ್ತು. ಎಲ್ಲಾ ಉಪನ್ಯಾಸಕರು‌ ವಿದ್ಯಾರ್ಥಿಗಳ‌ ಸ್ವಾಗತಕ್ಕೆ ಕಾದಿದ್ದರು. ವಿದ್ಯಾರ್ಥಿಗಳಿಗೆ ಕಾದು ಕಾದು ಸುಸ್ತಾದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ಒಬ್ಬ ವಿದ್ಯಾರ್ಥಿನಿ ಮಾತ್ರ ಹಾಜರಾಗಿದ್ದರು. ಎಲ್‌ವಿಡಿ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಎಜು ಸೇರಿದಂತೆ ಜಿಲ್ಲೆಯ ಹಲವು‌ ಕಾಲೇಜುಗಳಲ್ಲಿ ಉಪನ್ಯಾಸಕರು, ಸಿಬ್ಬಂದಿ ಇದ್ದರೂ‌ ವಿದ್ಯಾರ್ಥಿಗಳು ಕಾಲೇಜಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಲಿಲ್ಲ.

‘ಸರ್ಕಾರದ ಮಾರ್ಗಸೂಚಿಯನ್ವಯ ಈಗಾಗಲೇ ಅಗತ್ಯ‌ ಮುನ್ನೆಚ್ಚರಿಕೆ ಕ್ರಮ ವಹಿಸಿ ಕಾಲೇಜು‌ ನಡೆಸಲು‌ ಸಿಧ್ಧತೆ ಮಾಡಿಕೊಂಡಿದ್ದೇವೆ. ಆದರೆ ಕೋವಿಡ್ ರಿಪೋಟ್ ಕಡ್ಡಾಯವಾಗಿ ತರಬೇಕೆಂಬ ನಿಯಮ ಹಾಗೂ ಆಫ್ ಲೈನ್ ತರಗತಿ ಕಡ್ಡಾಯ ವಲ್ಲ ಎಂಬ‌ ನಿಯಮ ಹಾಗೂ‌ವಿ ವಿವಿಧ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಆಗಮಿಸಲಿಲ್ಲ ಮತ್ತೊಮ್ಮೆ ವಿದ್ಯಾರ್ಥಿಗಳ ಗಮನಕ್ಕೆ ತರುತ್ತೇವೆ’ ಎಂದು ಟ್ಯಾಗೋರ್ ಮೆಮೋರಿಯಲ್ ಪದವಿ ಕಾಲೇಜಿನ ಪ್ರಾಚಾರ್ಯೆ ಅರುಣಾ ಕುಮಾರಿ ಟಿ. ಅವರು ಹೇಳಿದರು.

‘ಮೊದಲನೇ ದಿನವಾಗಿದ್ದರಿಂದ ಕಾಲೇಜಿಗೆ ಬಂದಿದ್ದೇವೆ. ಆದರೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಕೊಂಡು ಬರಬೇಕೆನ್ನುವ ಸರ್ಕಾರದ ನಿಯಮದಿಂದಾಗಿ ಬಹಳಷ್ಟು ಜನ ಸ್ನೇಹಿತರು‌ ಬಂದಿಲ್ಲ, ನಾನು ನನ್ನ ಸ್ನೇಹಿತೆಯ ಜೊತೆ ಎಂದಿನಂತೆ ಬೆಳಿಗ್ಗೆ ಕಾಲೇಜಿಗೆ ಬಂದರೂ ಸಾಕಷ್ಟು ಜನ ವಿದ್ಯಾರ್ಥಿಗಳ‌ ಬಾರದ ಕಾರಣ ತರಗತಿ ನಡೆಯಲಿಲ್ಲ‌. ಹೀಗಾಗಿ‌‌ ಊರಿಗೆ ವಾಪಸ್ ಹೋಗುತ್ತಿದ್ದೇವೆ’ ಎಂದು ತಾಲ್ಲೂಕಿನ‌ ವಡವಾಟಿ ಗ್ರಾಮದಿಂದ ಬಂದಿದ್ದ ವಿದ್ಯಾರ್ಥಿನಿ ಮಲ್ಲಮ್ಮ‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.