ADVERTISEMENT

ಸಿಂಧನೂರು | ‘ಮೂಲಭೂತವಾದ, ಬಂಡವಾಳಶಾಹಿ ಪರ ದೇಶದ ಆಡಳಿತ’: ಪಿ.ಕೆ.ಶ್ರೀಮತಿ ಟೀಚರ್

ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 6:53 IST
Last Updated 31 ಆಗಸ್ಟ್ 2025, 6:53 IST
ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಸಮ್ಮೇಳನದ ಅಂಗವಾಗಿ ಮಹಿಳೆಯರು ಮೆರವಣಿಗೆ ನಡೆಸಿದರು
ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಸಮ್ಮೇಳನದ ಅಂಗವಾಗಿ ಮಹಿಳೆಯರು ಮೆರವಣಿಗೆ ನಡೆಸಿದರು   

ಸಿಂಧನೂರು: ‘ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಕೋಮುವಾದ ಮತ್ತು ಬಂಡವಾಳಿಗರ ರಕ್ಷಣೆಗಾಗಿ ಆಡಳಿತ ನಿರ್ವಹಣೆ ಮಾಡುತ್ತಿದೆ’ ಎಂದು ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ.ಶ್ರೀಮತಿ ಟೀಚರ್ ಕಟುವಾಗಿ ಟೀಕಿಸಿದರು.

ನಗರದ ಟೌನ್‍ಹಾಲ್‍ನಲ್ಲಿ ಶನಿವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿಯಿಂದ ಹಮ್ಮಿಕೊಂಡಿದ್ದ 12ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ದಬ್ಬಾಳಿಕೆಯನ್ನು ವಿರೋಧಿಸಲು ಮಹಿಳೆಯರು ಒಗ್ಗಟ್ಟಾಗಬೇಕಾದ ಅವಶ್ಯಕತೆ ಇದೆ. ಪ್ರಗತಿಪರ ಚಳವಳಿಗಳ ಶತ್ರುವಾಗಿರುವ ಆರ್‌ಎಸ್‍ಎಸ್‍ನ ಪ್ರತಿಗಾಮಿ ಧೋರಣೆಗಳನ್ನು ಸೋಲಿಸಬೇಕಾಗಿದೆ’ ಎಂದರು.

ADVERTISEMENT

‘ಬೂಕರ್’ ಪ್ರಶಸ್ತಿ ಪಡೆದು ದೇಶಕ್ಕೆ ಗೌರವ ತಂದ ಭಾನು ಮುಸ್ತಾಕ್ ಅವರನ್ನು ಮುಸ್ಲಿಂ  ಮಹಿಳೆ ಎನ್ನುವ ಕಾರಣಕ್ಕೆ ದಸರಾ ಉತ್ಸವದ ಉದ್ಘಾಟನೆಗೆ ನಿರಾಕರಿಸುತ್ತಿರುವ ಕೋಮುವಾದಿ ಶಕ್ತಿಗಳ ಧೋರಣೆಯನ್ನು ವಿರೋಧಿಸಬೇಕು’ ಎಂದು ಕರೆ ನೀಡಿದರು.

ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳೆ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಯು.ವಾಸುಕಿ, ಖಜಾಂಚಿ ಪುಣ್ಯವತಿ, ಉಪಾಧ್ಯಕ್ಷರಾದ ಕೆ.ಎಸ್.ವಿಮಲಾ, ಕೆ.ನೀಲಾ ಮಾತನಾಡಿದರು. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಶಕುಂತಲಾ ಪಾಟೀಲ, ಜಿಲ್ಲಾ ಘಟಕದ ಕಾರ್ಯದರ್ಶಿ ವರಲಕ್ಷ್ಮಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ ಶಕುಂತಲಾ ನಾಗರೆಡ್ಡಿ, ಬಸವಂತರಾಯಗೌಡ ಕಲ್ಲೂರು, ಎಸ್.ದೇವೇಂದ್ರಗೌಡ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷೆ ಸರಸ್ವತಿ ಪಾಟೀಲ ಸ್ವಾಗತಿಸಿದರು. ಕೆ.ಎಸ್.ಲಕ್ಷ್ಮಿ ನಿರೂಪಿಸಿದರು. ಗೌರಮ್ಮ ಸಾಧಕರನ್ನು ಪರಿಚಯಿಸಿದರು.

ಹೋರಾಟದ ಮೂಲಕ ದೇವನ ಹಳ್ಳಿ ಕೃಷಿ ಭೂಮಿ ಉಳಿಸಿಕೊಂಡ ವೆಂಕಟಮ್ಮ, ಲಕ್ಷ್ಮಮ್ಮ, ಮುನಿಯಮ್ಮ, ಕಮಲ, ಅಂತರ್ ಧರ್ಮೀಯ ವಿವಾಹವಾದ ಕಾರಣಕ್ಕೆ ಮಗನನ್ನು ಕಳೆದುಕೊಂಡು ಹೋರಾಡುತ್ತಿರುವ ತಾಯಿ ನಾಜುಮ್ ಮಹಮ್ಮದ್ ಗೌಸ್ ಬೆಳಗಾವಿ, ಎಂಎಫ್‍ಐ ಕಿರುಕುಳ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಿದ ಭಾರತಿ ರಾಘವರೆಡ್ಡಿ, ರಾಧಿಕಾ ಲಿಂಗಸುಗೂರು ಅವರನ್ನು ಸಂಘರ್ಷದ ಸಾರ್ಥಕ ಹೆಜ್ಜೆ ಗುರುತು ಮೂಡಿಸಿದ ವ್ಯಕ್ತಿಗಳೆಂದು ಸನ್ಮಾನಿಸಲಾಯಿತು.

ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಶನಿವಾರ ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿದರು 

ಬೃಹತ್ ಮೆರವಣಿಗೆ:

ನಗರದ ಶಾದಿಮಹಲ್‍ನಿಂದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಸಮಾನತೆ ನಮ್ಮ ಹಕ್ಕು ಘನತೆಗಾಗಿ ನಮ್ಮ ಹೋರಾಟ ಸ್ವಾತಂತ್ರ್ಯ ನಮ್ಮ ಹಕ್ಕು ಮಹಿಳಾ ವಿರೋಧಿಗಳಿಗೆ ಧಿಕ್ಕಾರ ಕೋಮುವಾದಿಗಳಿಗೆ ಧಿಕ್ಕಾರದ ಘೋಷಣೆಗಳು ಮೊಳಗಿದವು. ಮಹಿಳೆಯರ ಡೊಳ್ಳು ಕುಣಿತ ಮೆರವಣಿಗೆಗೆ ಕಳೆ ಕಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.